ಫೋನ್‌ಪೇ ವಾಲೆಟ್ ದೀರ್ಘಕಾಲ ಬಳಸದೇ ಇಟ್ಟಿರುವ ಗ್ರಾಹಕರಿಗೆ ನಿರ್ವಹಣಾ ಶುಲ್ಕ ಅನ್ವಯ

ಫೋನ್‌ಪೇ ವಾಲೆಟ್ ದೀರ್ಘಕಾಲ ಬಳಸದೇ ಇಟ್ಟಿರುವ ಗ್ರಾಹಕರಿಗೆ ನಿರ್ವಹಣಾ ಶುಲ್ಕ ಅನ್ವಯವಾಗಬಹುದು ಎಂದು ಕಂಪನಿ ತಿಳಿಸಿದ್ದು, ಖಾತೆಯನ್ನು ಸಕ್ರಿಯವಾಗಿಡಲು ಕೆಲವು ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ

ಡಿಜಿಟಲ್ ಪಾವತಿಗಳ ಯುಗದಲ್ಲಿ ಫೋನ್‌ಪೇ (PhonePe) ಅನೇಕ ಜನರ ದಿನನಿತ್ಯದ ಬದುಕಿನ ಭಾಗವಾಗಿದೆ. ಯುಪಿಐ ಪಾವತಿಗಳ ಜೊತೆಗೆ ಫೋನ್‌ಪೇ ವಾಲೆಟ್ ಸೇವೆಯನ್ನೂ ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಆದರೆ ವಾಲೆಟ್ ಬಳಸುವವರಿಗೆ ಇದೀಗ ಒಂದು ಹೊಸ ನಿಯಮದ ಬಗ್ಗೆ ತಿಳಿದಿರಬೇಕು.

ಕಂಪನಿಯ ಹೊಸ ಮಾರ್ಗಸೂಚಿಗಳ ಪ್ರಕಾರ, ಒಂದು ವರ್ಷದ ಕಾಲ ಯಾವುದೇ ವಾಲೆಟ್ ವ್ಯವಹಾರ ನಡೆಸದ ಖಾತೆಗಳನ್ನು ನಿಷ್ಕ್ರಿಯ (Inactive) ವಾಲೆಟ್ ಎಂದು ಪರಿಗಣಿಸಬಹುದು. ಇಂತಹ ಖಾತೆಗಳ ಮೇಲೆ ತ್ರೈಮಾಸಿಕ ನಿರ್ವಹಣಾ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಕಂಪನಿ ಪರಿಚಯಿಸಿದೆ.

ಅನೇಕ ಬಳಕೆದಾರರು ಯುಪಿಐ ಮೂಲಕ ಹಣ ಕಳುಹಿಸಿದರೆ ಅಥವಾ ಸ್ವೀಕರಿಸಿದರೆ ಸಾಕು, ವಾಲೆಟ್ ಸಕ್ರಿಯವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಫೋನ್‌ಪೇ ನಿಯಮದ ಪ್ರಕಾರ ಬ್ಯಾಂಕ್ ಖಾತೆಯಿಂದ ನೇರವಾಗಿ ನಡೆಯುವ ಯುಪಿಐ ವ್ಯವಹಾರಗಳನ್ನು ವಾಲೆಟ್ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ. ವಾಲೆಟ್‌ನಲ್ಲಿರುವ ಮೊತ್ತವನ್ನು ಬಳಸಿ ನಡೆಸುವ ವ್ಯವಹಾರಗಳನ್ನಷ್ಟೇ ಮಾನ್ಯತೆ ನೀಡಲಾಗುತ್ತದೆ.

ಉದಾಹರಣೆಗೆ ಮೊಬೈಲ್ ರೀಚಾರ್ಜ್, ಬಿಲ್ ಪಾವತಿ ಅಥವಾ ಇತರೆ ಸಣ್ಣ ವ್ಯವಹಾರಗಳನ್ನು ವಾಲೆಟ್ ಬ್ಯಾಲೆನ್ಸ್ ಮೂಲಕ ಮಾಡಿದರೆ ಖಾತೆ ಸಕ್ರಿಯವಾಗಿರುತ್ತದೆ. ಒಂದು ರೂಪಾಯಿ ಮೌಲ್ಯದ ಸಣ್ಣ ವ್ಯವಹಾರ ಕೂಡ ವಾಲೆಟ್ ಚಟುವಟಿಕೆಯಾಗಿ ಪರಿಗಣಿಸಬಹುದು.

ಯಾವುದೇ ಶುಲ್ಕ ಕಡಿತ ಮಾಡುವ ಮೊದಲು ಕಂಪನಿ ಬಳಕೆದಾರರಿಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ. ಸಾಮಾನ್ಯವಾಗಿ ನೋಟಿಸ್ ನೀಡಿದ ನಂತರವೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಾತ್ರ ವಾಲೆಟ್‌ನಲ್ಲಿರುವ ಮೊತ್ತದಿಂದ ಶುಲ್ಕ ಕಡಿತವಾಗುತ್ತದೆ. ವಾಲೆಟ್‌ನಲ್ಲಿ ಇರುವ ಮೊತ್ತಕ್ಕಿಂತ ಹೆಚ್ಚಾಗಿ ಯಾವುದೇ ಹಣವನ್ನು ಬ್ಯಾಂಕ್ ಖಾತೆಯಿಂದ ಕಡಿತ ಮಾಡುವುದಿಲ್ಲ.

ವಾಲೆಟ್‌ನಲ್ಲಿ ₹100 ಕ್ಕಿಂತ ಕಡಿಮೆ ಮೊತ್ತ ಇದ್ದರೆ, ಲಭ್ಯವಿರುವ ಮೊತ್ತದಷ್ಟೇ ಕಡಿತಗೊಳ್ಳುತ್ತದೆ. ಖಾತೆ ಋಣಾತ್ಮಕ (Negative Balance) ಆಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಈ ರೀತಿಯ ಶುಲ್ಕ ತಪ್ಪಿಸಿಕೊಳ್ಳಲು ಬಳಕೆದಾರರು ವರ್ಷಕ್ಕೆ ಕನಿಷ್ಠ ಒಂದು ಬಾರಿ ವಾಲೆಟ್ ಬಳಸಿ ವ್ಯವಹಾರ ನಡೆಸುವುದು ಉತ್ತಮ. ವಾಲೆಟ್ ಅಗತ್ಯವಿಲ್ಲದಿದ್ದರೆ ಅದನ್ನು ಮುಚ್ಚುವ ಆಯ್ಕೆಯೂ ಲಭ್ಯವಿದೆ. ವಾಲೆಟ್ ಮುಚ್ಚುವ ಸಂದರ್ಭದಲ್ಲಿ ಉಳಿದಿರುವ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ಅದೇ ವೇಳೆ ಫೋನ್‌ಪೇಯಿಂದ ಬರುವ ಎಸ್‌ಎಂಎಸ್ ಹಾಗೂ ಆ್ಯಪ್ ನೋಟಿಫಿಕೇಶನ್‌ಗಳನ್ನು ಗಮನಿಸುವುದು ಮುಖ್ಯ. ಇದರಿಂದ ಯಾವುದೇ ಬದಲಾವಣೆ ಅಥವಾ ಶುಲ್ಕದ ಬಗ್ಗೆ ಮುಂಚಿತ ಮಾಹಿತಿ ಪಡೆಯಬಹುದು. ಸಾಮಾನ್ಯ ಯುಪಿಐ ವ್ಯವಹಾರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದನ್ನು ಬಳಕೆದಾರರು ನೆನಪಿಟ್ಟುಕೊಳ್ಳಬೇಕು.

Related Stories