ವಿಧಾನ ಪರಿಷತ್ ಚುನಾವಣೆ ಅಡ್ಡಮತದಾನ: ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರಿಂದ ಆಣೆ-ಪ್ರಮಾಣ

ಈ ಗೊಂದಲಕ್ಕೆ ತೆರೆ ಎಳೆಯಲು ಮತ್ತು ನೈಜ ಆರೋಪಿಗಳನ್ನು ಪತ್ತೆಹಚ್ಚಲು ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ (Karnataka Legislative Council Election) ಅಡ್ಡಮತದಾನದ ಹಿನ್ನೆಲೆಯಲ್ಲಿ, ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆ ಹಚ್ಚಲು ರಾಜ್ಯ ಬಿಜೆಪಿ ದೈವದ ಮೊರೆ ಹೋಗಿದೆ. ಮುಂದಿನ ವಾರ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಅಲ್ಲಿ ಶಾಸಕರಿಂದ ದೇವರ ಮುಂದೆ ಆಣೆ-ಪ್ರಮಾಣ ಮಾಡಿಸಿ ಸತ್ಯ ಸಂಗ್ರಹಿಸಲು ನಾಯಕರು ಮುಂದಾಗಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ 4 ಮತಗಳು ಕ್ರಾಸ್ ವೋಟಿಂಗ್ ಆಗಿವೆ ಎಂಬ ಚರ್ಚೆ ನಡೆಯುತ್ತಿರುವುದರಿಂದ, ಪಕ್ಷದ ಕಾರ್ಯಕರ್ತರು ತೀವ್ರ ಬೇಸರಗೊಂಡಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಎಲ್ಲ 63 ಶಾಸಕರನ್ನೂ ಅನುಮಾನದಿಂದ ನೋಡುವಂತಾಗಿದೆ.

ಈ ಗೊಂದಲಕ್ಕೆ ತೆರೆ ಎಳೆಯಲು ಮತ್ತು ನೈಜ ಆರೋಪಿಗಳನ್ನು ಪತ್ತೆಹಚ್ಚಲು ಧರ್ಮಸ್ಥಳ ಶ್ರೀಕ್ಷೇತ್ರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಲಾಗಿದೆ. “ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ಪಕ್ಷದ ವರಿಷ್ಠರಾದ ನಿತಿನ್ ನಬಿನ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ.

“ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಒಟ್ಟು 11 ಮತಗಳು ಕ್ರಾಸ್ ವೋಟಿಂಗ್ ಆಗಿದ್ದರಿಂದ ಜೆಡಿಎಸ್ ಅಭ್ಯರ್ಥಿ ಸೋಲುವಂತಾಯಿತು; ಆದರೆ, ಕೊನೆಯ ಕ್ಷಣದಲ್ಲಿ ತಲಾ ಅಭ್ಯರ್ಥಿಗೆ 30 ಮತಗಳನ್ನು ನೀಡಲು ಬಿಜೆಪಿ ನಾಯಕರು ತಂತ್ರ ಬದಲಿಸಿದ್ದರಿಂದ ದೊಡ್ಡ ಮಟ್ಟದ ಮುಖಭಂಗ ತಪ್ಪಿ, ಅವರ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು ಪ್ರಯಾಸದ ಗೆಲುವು ಸಾಧಿಸುವಂತಾಯಿತು.”

ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡು ದ್ರೋಹ ಬಗೆದಿರುವ ಶಾಸಕರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

 

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.