ಮಧುಮೇಹಿಗಳಿಗೆ ಬಿಗ್ ರಿಲೀಫ್ :ವಿಶ್ವದಲ್ಲೇ ಮೊದಲು, ವಾರಕ್ಕೊಮ್ಮೆ ಮಾತ್ರ ನೀಡುವ ಇನ್ಸುಲಿನ್ ಭಾರತದಲ್ಲಿ ಬಿಡುಗಡೆ!

ಪ್ರತಿದಿನ ಸೂಜಿ ಚುಚ್ಚಿಕೊಳ್ಳುವ ನೋವಿನಿಂದ ಬೇಸತ್ತಿದ್ದ ಮಧುಮೇಹಿಗಳಿಗಾಗಿ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳುವ ಜಗತ್ತಿನ ಪ್ರಥಮ ಬೇಸಲ್ ಇನ್ಸುಲಿನ್ ‘ಅವಿಕ್ಲಿ’ ಇನ್ಸುಲಿನ್ ಐಕೋಡೆಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ದೇಶದ ಕೋಟ್ಯಂತರ ಡಯಾಬಿಟಿಸ್ ರೋಗಿಗಳಿಗೆ ನೆಮ್ಮದಿ ನೀಡುವ ದೂತರಂತೆ ಡೆನ್ಮಾರ್ಕ್ ಮೂಲದ ಪ್ರಖ್ಯಾತ ನೊವೊ ನಾರ್ಡಿಸ್ಕ್ ಕಂಪನಿಯು ಇನ್ಸುಲಿನ್ ಚಿಕಿತ್ಸಾ ಪದ್ಧತಿಯಲ್ಲಿ ಮಹತ್ವದ ಕ್ರಾಂತಿ ಸೃಷ್ಟಿಸಿದೆ. ಪ್ರತಿದಿನ ಸೂಜಿ ಚುಚ್ಚಿಕೊಳ್ಳುವ ನೋವಿನಿಂದ ಬೇಸತ್ತಿದ್ದ ಮಧುಮೇಹಿಗಳಿಗಾಗಿ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳುವ ಜಗತ್ತಿನ ಪ್ರಥಮ ಬೇಸಲ್ ಇನ್ಸುಲಿನ್ ‘ಅವಿಕ್ಲಿ’ ಇನ್ಸುಲಿನ್ ಐಕೋಡೆಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ಈ ವಿಸ್ಮಯಕಾರಿ ವೈದ್ಯಕೀಯ ಆವಿಷ್ಕಾರದ ಹಿನ್ನೆಲೆಯಲ್ಲಿ ರೋಗಿಗಳು ಇನ್ನು ಮುಂದೆ ವರ್ಷಕ್ಕೆ 365 ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುವ ಬದಲು ಕೇವಲ 52 ಇಂಜೆಕ್ಷನ್‌ಗಳನ್ನು ಪಡೆದರೆ ಸಾಕಾಗುತ್ತದೆ. ಈ ವಿಶಿಷ್ಟ ಸೌಲಭ್ಯವನ್ನು ತನ್ನ ನಾಗರಿಕರಿಗೆ ಒದಗಿಸಿದ ವಿಶ್ವದ ಆರನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ.

ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಪಡೆದಿರುವ ಈ ‘ಅವಿಕ್ಲಿ’ ಇನ್ಸುಲಿನ್ ಅನ್ನು ಟೈಪ್-1 ಮತ್ತು ಟೈಪ್-2 ಮಧುಮೇಹದಿಂದ ಬಳಲುತ್ತಿರುವ ವಯಸ್ಕ ರೋಗಿಗಳಿಗೆ ಬಳಸಬಹುದಾಗಿದೆ. ಇದು ಸುಲಭವಾಗಿ ಸಾಗಿಸಬಹುದಾದ ಹಾಗೂ ಚುಚ್ಚಿಕೊಳ್ಳಬಹುದಾದ ‘ಫ್ಲೆಕ್ಸ್ಟಚ್’ ಪೆನ್ ರೂಪದಲ್ಲಿ ಲಭ್ಯವಿರಲಿದೆ. ಈ ಇಂಜೆಕ್ಷನ್ ಪೆನ್‌ಗಳ ದರಪಟ್ಟಿಯನ್ನು ಗಮನಿಸುವುದಾದರೆ, 700 ಯೂನಿಟ್ ಇನ್ಸುಲಿನ್ ಸಾಮರ್ಥ್ಯವಿರುವ 1 ಮಿ.ಲೀ ಪೆನ್ನಿನ ಬೆಲೆ ₹2,611 ಆಗಿದ್ದರೆ, 2,100 ಯೂನಿಟ್ ಹೊಂದಿರುವ 3 ಮಿ.ಲೀ ಪೆನ್ನಿನ ಬೆಲೆ ₹7,833 ಆಗಿದೆ.

ಸಾಮಾನ್ಯವಾಗಿ ಮಧುಮೇಹ ರೋಗಿಯೊಬ್ಬನಿಗೆ ವಾರಕ್ಕೆ ಸರಾಸರಿ 70 ಯೂನಿಟ್ ಇನ್ಸುಲಿನ್ ಅಗತ್ಯವಿರುವುದರಿಂದ, ಕೇವಲ ₹261 ರಿಂದ ₹263 ರ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ವಾರದ ಇಡೀ ಇನ್ಸುಲಿನ್ ಡೋಸ್ ಪೂರ್ಣಗೊಳ್ಳುತ್ತದೆ. ಡೆನ್ಮಾರ್ಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧವಾಗುವ ಈ ಇನ್ಸುಲಿನ್ ಅನ್ನು ನೇರವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದು ರೋಗಿಗಳ ದೈನಂದಿನ ಮಾನಸಿಕ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.