ಚೆನ್ನಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ; ಸುಳ್ಳು ವದಂತಿ ನಂಬಬೇಡಿ ಎಂದ ಮಣಿಪಾಲ್ ಆಸ್ಪತ್ರೆ ವೈದ್ಯರು!

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ (Chennamma) ಅವರ ಆರೋಗ್ಯದ ಕುರಿತು ಆಸ್ಪತ್ರೆಯ ವತಿಯಿಂದ ಅಧಿಕೃತ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಾಗಿದೆ

ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ (Chennamma) ಅವರ ಆರೋಗ್ಯದ ಕುರಿತು ಆಸ್ಪತ್ರೆಯ ವತಿಯಿಂದ ಅಧಿಕೃತ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಸತ್ಯನಾರಾಯಣ ಅವರು ಚೆನ್ನಮ್ಮ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿರುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಡಾ. ಸತ್ಯನಾರಾಯಣ ಅವರು ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರ ಸ್ವರೂಪದಲ್ಲಿತ್ತು. ಆದರೆ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೇ. 20 ರಿಂದ 30ರಷ್ಟು ಉಸಿರಾಟದ ತೊಂದರೆ ಹತೋಟಿಗೆ ಬಂದಿದೆ. ನಿನ್ನೆ ಉಸಿರಾಟಕ್ಕಾಗಿ ಅವರು ಪಡುತ್ತಿದ್ದ ಶ್ರಮ ಈಗ ಗಣನೀಯವಾಗಿ ಕಡಿಮೆಯಾಗಿದ್ದು, ನಿನ್ನೆಗಿಂತ ಇಂದು ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ.

ವೆಂಟಿಲೇಟರ್‌ನಲ್ಲಿ ಇಲ್ಲ ಚೆನ್ನಮ್ಮ; ಬಿಪಿ ಕಂಟ್ರೋಲ್‌ನಲ್ಲಿದೆ :

ಸಾರ್ವಜನಿಕರು ಹಾಗೂ ಜೆಡಿಎಸ್ ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದಿರುವ ವೈದ್ಯರು ಕೆಲವು ಪ್ರಮುಖ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ:

ಸಹಜ ಉಸಿರಾಟ: ಚೆನ್ನಮ್ಮ ಅವರು ಸದ್ಯಕ್ಕೆ ವೆಂಟಿಲೇಟರ್‌ನಲ್ಲಿ ಇಲ್ಲ. ಅವರು ಸಹಜವಾಗಿಯೇ ಉಸಿರಾಟ ನಡೆಸುತ್ತಿದ್ದಾರೆ.
ಸಪೋರ್ಟಿವ್ ಕೇರ್: ಅವರಿಗೆ ಚೇತರಿಕೆಗೆ ಪೂರಕವಾದ ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು (Supportive care) ಮಾತ್ರ ನೀಡಲಾಗುತ್ತಿದೆ.
ಪ್ಯಾರಾಮೀಟರ್ಸ್ ಸ್ಥಿರ: ಸದ್ಯಕ್ಕೆ ಅವರ ರಕ್ತದೊತ್ತಡ (BP) ಸೇರಿದಂತೆ ಉಳಿದೆಲ್ಲಾ ಆರೋಗ್ಯದ ಪ್ಯಾರಾಮೀಟರ್‌ಗಳು ಸ್ಥಿರವಾಗಿವೆ (Normal).

ವಯೋಸಹಜ ಸಮಸ್ಯೆ: “80 ವರ್ಷ ಮೇಲ್ಪಟ್ಟಾಗ ದೇಹವು ಚಿಕಿತ್ಸೆಗೆ ಸ್ಪಂದಿಸುವುದು ಸ್ವಲ್ಪ ನಿಧಾನವಾಗುತ್ತದೆ. ಕೆಲವು ವಯೋಸಹಜ ವ್ಯಾಧಿಗಳು ಇರುವುದರಿಂದ ಒಂದೆರಡು ದಿನಗಳಲ್ಲಿ ಎಲ್ಲವೂ ಸಂಪೂರ್ಣ ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಚಿಕಿತ್ಸೆ ನಿರಂತರವಾಗಿ ನಡೆಯಬೇಕಿದೆ. ಅವರಿಗೆ ಯಾವುದೇ ರೀತಿಯ ನೋವು ಅಥವಾ ಸಂಕಟವಾಗದಂತೆ ನಾವು ಎಚ್ಚರಿಕೆ ವಹಿಸುತ್ತಿದ್ದೇವೆ” ಎಂದು ಡಾ. ಸತ್ಯನಾರಾಯಣ ವಿವರಿಸಿದ್ದಾರೆ.

ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ವೈದ್ಯರ ಮನವಿ 

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗಾಳಿಸುದ್ದಿಗಳ ಬಗ್ಗೆ ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಸುಳ್ಳು ವದಂತಿಗಳನ್ನು ಹರಡಬೇಡಿ ಅಥವಾ ನಂಬಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

“ಚೆನ್ನಮ್ಮ ಅವರು ಚಿಕಿತ್ಸೆಗೆ ಸ್ಪಂದಿಸುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರಾಗಿ ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ, ಉಳಿದದ್ದು ಭಗವಂತನಿಗೆ ಬಿಟ್ಟಿದ್ದು” ಎಂದು ಡಾ. ಸತ್ಯನಾರಾಯಣ ಹೇಳಿದ್ದಾರೆ. ಸದ್ಯ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.