ವಾಟರ್ ಪಾರ್ಕ್​ನಲ್ಲಿ ಎಂಜಾಯ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ; ಚರ್ಮ ಮತ್ತು ಕೂದಲಿಗೆ ಆಗಬಹುದು ತೊಂದರೆ!

ಈಜುವುದು ಆರೋಗ್ಯಕ್ಕೆ ಅತ್ಯುತ್ತಮ ವ್ಯಾಯಾಮ ಮತ್ತು ಮನರಂಜನೆ ಹೌದಾದರೂ, ಪೂಲ್‌ನಲ್ಲಿರುವ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ನಿಮ್ಮ ಚರ್ಮ ಹಾಗೂ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಬೇಸಿಗೆಯ ಬಿಸಿಲಿನಿಂದ ಪಾರಾಗಲು ಅಥವಾ ವೀಕೆಂಡ್‌ನಲ್ಲಿ ರಿಲ್ಯಾಕ್ಸ್ ಮಾಡಲು ಹಲವರು ಸ್ವಿಮ್ಮಿಂಗ್ ಪೂಲ್‌ ಅಥವಾ ವಾಟರ್ ಪಾರ್ಕ್​ಗಳಿಗೆ ಹೋಗಲು ಇಷ್ಟಪಡುತ್ತಾರೆ. ಈಜುವುದು ಆರೋಗ್ಯಕ್ಕೆ ಅತ್ಯುತ್ತಮ ವ್ಯಾಯಾಮ ಮತ್ತು ಮನರಂಜನೆ ಹೌದಾದರೂ, ಪೂಲ್‌ನಲ್ಲಿರುವ ಕ್ಲೋರಿನ್ ಮತ್ತು ಇತರ ರಾಸಾಯನಿಕಗಳು ನಿಮ್ಮ ಚರ್ಮ ಹಾಗೂ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಚರ್ಮ ಒಣಗುವುದು, ತುರಿಕೆ, ಅಲರ್ಜಿ, ಕೂದಲು ಒಡೆಯುವುದು ಮತ್ತು ಕೂದಲು ಉದುರುವ ಸಮಸ್ಯೆಗಳು ಎದುರಾಗಬಹುದು ಎಂದು ಚರ್ಮರೋಗ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ವಾಟರ್ ಪಾರ್ಕ್ ಅಥವಾ ಸ್ವಿಮ್ಮಿಂಗ್ ಪೂಲ್‌ಗೆ ಇಳಿಯುವ ಮುನ್ನ ಮತ್ತು ನಂತರ ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್.

1. ಪೂಲ್‌ಗೆ ಇಳಿಯುವ ಮುನ್ನ ತೆಗೆದುಕೊಳ್ಳಬೇಕಾದ ಜಾಗ್ರತೆಗಳು

  • ಶುದ್ಧ ನೀರಿನ ಸ್ನಾನ: ಸ್ವಿಮ್ಮಿಂಗ್ ಪೂಲ್‌ಗೆ ಇಳಿಯುವ ಮೊದಲು ಇಡೀ ದೇಹ ಮತ್ತು ಕೂದಲನ್ನು ಶುದ್ಧ ನೀರಿನಿಂದ ಒದ್ದೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಮತ್ತು ಕೂದಲು ಕ್ಲೋರಿನ್ ಮಿಶ್ರಿತ ನೀರನ್ನು ಹೆಚ್ಚು ಹೀರಿಕೊಳ್ಳುವುದಿಲ್ಲ.
  • ಸ್ವಿಮ್ಮಿಂಗ್ ಕ್ಯಾಪ್ ಬಳಸಿ: ಉದ್ದ ಕೂದಲು ಹೊಂದಿರುವವರು ಕೂದಲನ್ನು ಚೆನ್ನಾಗಿ ಕಟ್ಟಿ ಕೊಳ್ಳಬೇಕು ಅಥವಾ ಸ್ವಿಮ್ಮಿಂಗ್ ಕ್ಯಾಪ್ ಧರಿಸುವುದು ಉತ್ತಮ. ಇದು ಕ್ಲೋರಿನ್ ನೀರು ಕೂದಲಿಗೆ ನೇರವಾಗಿ ತಾಗದಂತೆ ತಡೆಯುತ್ತದೆ.
  • ಸನ್‌ಸ್ಕ್ರೀನ್ ಕಡ್ಡಾಯ: ನೀರಿಗೆ ಇಳಿಯುವ 20 ರಿಂದ 30 ನಿಮಿಷಗಳ ಮೊದಲು ವಾಟರ್-ರೆಸಿಸ್ಟೆಂಟ್ (Water-resistant) ಸನ್‌ಸ್ಕ್ರೀನ್ ಅನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಸೂರ್ಯನ ಹಾನಿಕಾರಕ ಕಿರಣಗಳು ಮತ್ತು ಕ್ಲೋರಿನ್‌ನಿಂದ ಚರ್ಮವನ್ನು ರಕ್ಷಿಸುತ್ತದೆ.

2. ನೀರಿನಿಂದ ಹೊರಬಂದ ತಕ್ಷಣ ಏನು ಮಾಡಬೇಕು?

  • ತಕ್ಷಣ ತೊಳೆಯಿರಿ: ಪೂಲ್‌ನಿಂದ ಹೊರಬಂದ ತಕ್ಷಣ ದೇಹ ಮತ್ತು ಕೂದಲನ್ನು ಮೃದುವಾದ ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕ್ಲೋರಿನ್ ದೀರ್ಘಕಾಲ ಚರ್ಮದ ಮೇಲಿದ್ದರೆ, ಅದು ಚರ್ಮದ ಸಹಜ ತೇವಾಂಶವನ್ನು ಕಸಿದುಕೊಳ್ಳುತ್ತದೆ.
  • ಮೃದುವಾದ ಶಾಂಪೂ ಮತ್ತು ಕಂಡೀಷನರ್: ಕ್ಲೋರಿನ್‌ನಿಂದ ಕೂದಲು ನಿರ್ಜೀವವಾಗಿ, ಒಣಗಿದಂತಾಗುವುದನ್ನು ತಡೆಯಲು ಮೃದುವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಆ ಬಳಿಕ ಉತ್ತಮ ಕಂಡೀಷನರ್ ಅಥವಾ ಹೇರ್ ಮಾಸ್ಕ್ ಬಳಸುವುದು ಅತ್ಯಗತ್ಯ.
  • ಮಾಯಿಶ್ಚರೈಸರ್ ಹಚ್ಚಿ: ಸ್ನಾನ ಮುಗಿದ ತಕ್ಷಣ ಇಡೀ ದೇಹಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮದ ಕಳೆದುಹೋದ ತೇವಾಂಶವನ್ನು ಮರಳಿ ನೀಡಲು ಸಹಾಯ ಮಾಡುತ್ತದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.