Namma metro reels : ರೀಲ್ಸ್​ ಪ್ರಿಯರೇ ಗಮನಿಸಿ…! ಮೆಟ್ರೋದಲ್ಲಿ ರೀಲ್ಸ್​ ಮಾಡಿದ್ರೆ ಬೀಳುತ್ತೆ ಭಾರೀ ದಂಡ

ಹೊಸ ನಿಯಮಾವಳಿಗಳ ಪ್ರಕಾರ, ಮೆಟ್ರೋ ಆವರಣದಲ್ಲಿ ನಿಯಮ ಉಲ್ಲಂಘಿಸುವವರಿಗೆ ಕನಿಷ್ಠ 2,500 ರೂಪಾಯಿ ಗಳಿಂದ ಗರಿಷ್ಠ 25,000 ರೂಪಾಯಿಗಳವರೆಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ.

Namma metro reels : ಬೆಂಗಳೂರು : ಬೆಂಗಳೂರು ಮಹಾನಗರದ ಜೀವರಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಪ್ರಯಾಣಿಕರು ಮತ್ತಷ್ಟು ಶಿಸ್ತು ಪಾಲಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ರೀಲ್ಸ್ ಮಾಡುವುದು, ಗದ್ದಲ ಸೃಷ್ಟಿಸುವುದು ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಘಟನೆಗಳು ಹೆಚ್ಚಾಗುತ್ತಿವೆ‌.

ಈ ರೀತಿಯ ಬೇಜವಾಬ್ದಾರಿ ವರ್ತನೆಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ಬಿಎಂಆರ್ಸಿಎಲ್ ಹೊಸ ದಂಡದ ನಿಯಮಗಳನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಮೆಟ್ರೋ ಆವರಣದಲ್ಲಿ ನಿಯಮ ಉಲ್ಲಂಘಿಸುವವರಿಗೆ ಕನಿಷ್ಠ 2,500 ರೂಪಾಯಿ ಗಳಿಂದ ಗರಿಷ್ಠ 25,000 ರೂಪಾಯಿಗಳವರೆಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ. ಪ್ರಮುಖವಾಗಿ, ಭದ್ರತೆಗೆ ಸವಾಲೊಡ್ಡಿ ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುವುದು ಅಥವಾ ಹಳಿಗಳ ಮೇಲೆ ಓಡಾಡುವಂತಹ ಗಂಭೀರ ಕೃತ್ಯಗಳಿಗೆ 25,000 ರೂಪಾಯಿಗಳವರೆಗೆ ದಂಡ ಬೀಳಲಿದೆ.

ಇನ್ನು ರೈಲಿನೊಳಗೆ ಅನುಮತಿಯಿಲ್ಲದೆ ವ್ಯಾಪಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಅದಕ್ಕೂ 5,000 ರೂಪಾಯಿ ದಂಡ ನಿಗದಿಪಡಿಸಲಾಗಿದೆ. ಮೊದಲಿಗೆ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಅಥವಾ ಜೋರಾಗಿ ಸಂಗೀತ ಆಲಿಸಿ ಸಹಪ್ರಯಾಣಿಕರಿಗೆ ತೊಂದರೆ ನೀಡಿದರೆ ಕೇವಲ 500 ರೂಪಾಯಿ ದಂಡವಿತ್ತು.

ಆದರೆ ಇನ್ನು ಮುಂದೆ ಇಂತಹ ಸಣ್ಣಪುಟ್ಟ ನಿರ್ಲಕ್ಷ್ಯಗಳಿಗೂ 2,500 ರಿಂದ 10,000 ರೂಪಾಯಿಗಳವರೆಗೆ ಜೇಬಿಗೆ ಕತ್ತರಿ ಬೀಳಲಿದೆ. ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು ಅಥವಾ ಪೋಸ್ಟರ್ ಹಚ್ಚುವ ವಿಕೃತಿಗೂ ದಂಡದ ಮೊತ್ತವನ್ನು 10,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಜಗಳವಾಡುವುದು ಅಥವಾ ಉಗುಳುವಂತಹ ಅಸಭ್ಯ ವರ್ತನೆಗಳಿಗೂ ದಂಡದ ಬಿಸಿ ಮುಟ್ಟಿಸಲಾಗುತ್ತದೆ. ಇನ್ನು ಪಟಾಕಿಯಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸಾರ್ವಜನಿಕ ಆಸ್ತಿಯ ರಕ್ಷಣೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಮೂರು ವರ್ಷಗಳಿಗೊಮ್ಮೆ ಈ ದಂಡದ ಮೊತ್ತವು ಶೇಕಡಾ 10 ರಷ್ಟು ಹೆಚ್ಚಾಗಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.

Namma metro reels Instagram videos penalty rules Karnataka

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »