ಕೆಲಸದ ಒತ್ತಡದಲ್ಲೂ ಮರೆಯಾಗದ ಕರುಣೆ! ಡೆಲಿವರಿ ಎಕ್ಸಿಕ್ಯೂಟಿವ್ ಕರ್ತವ್ಯನಿಷ್ಠೆಗೆ ನೆಟ್ಟಿಗರು ಫಿದಾ!

ಬೆಂಗಳೂರು ನಿವಾಸಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ನಿವೇದಿತಾ ರೈ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@dakshnmom) ಈ ಅಪರೂಪದ ಅನುಭವವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಂತಹ ಗಡಿಬಿಡಿಯ ಮಹಾನಗರದಲ್ಲಿ ಪ್ರತಿಯೊಬ್ಬರೂ ತಮ್ಮದೇ ಕೆಲಸದ ಒತ್ತಡದಲ್ಲಿ ಓಡಾಡುತ್ತಿರುತ್ತಾರೆ. ಇಂತಹ ದಿನಚರಿಯಲ್ಲಿ ಅಪರಿಚಿತರೊಬ್ಬರು ತೋರುವ ಸಣ್ಣ ಕಾಳಜಿಯೂ ಹೃದಯಕ್ಕೆ ಹತ್ತಿರವಾಗುತ್ತದೆ. ಇದಕ್ಕೊಂದು ಸೂಕ್ತ ಉದಾಹರಣೆ ಬೆಂಗಳೂರಿನಲ್ಲಿ ನಡೆದ ಈ ಘಟನೆ. ರಾತ್ರಿ 10:30ರ ಸುಮಾರಿಗೆ ಫ್ಲಿಪ್‌ಕಾರ್ಟ್ (Flipkart Minutes) ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬರು ತೋರಿದ ಮಾನವೀಯತೆ ಹಾಗೂ ಕರ್ತವ್ಯ ಪ್ರಜ್ಞೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು ನಿವಾಸಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ನಿವೇದಿತಾ ರೈ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@dakshnmom) ಈ ಅಪರೂಪದ ಅನುಭವವನ್ನು ಹಂಚಿಕೊಂಡಿದ್ದಾರೆ. ದಿನದ ಕೆಲಸದ ಹಾವಳಿಯಲ್ಲಿ ನಿವೇದಿತಾ ಅವರಿಗೆ ತಮ್ಮ ಮಗುವಿಗೆ ಡೈಪರ್ ಮುಗಿದುಹೋಗಿರುವುದು ಗಮನಕ್ಕೆ ಬಂದಿರಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ಡೈಪರ್ ಖಾಲಿಯಾಗಿರುವುದು ಗೊತ್ತಾಗುತ್ತಿದ್ದಂತೆ ಆತಂಕಗೊಂಡ ಅವರು, ತಕ್ಷಣವೇ ‘ಫ್ಲಿಪ್‌ಕಾರ್ಟ್ ಮಿನಿಟ್ಸ್’ (Flipkart Minutes) ಮೂಲಕ ತುರ್ತಾಗಿ ಡೈಪರ್ ಆರ್ಡರ್ ಮಾಡಿದ್ದರು.

ಆರ್ಡರ್ ಮಾಡಿದ ಕೇವಲ ಅರ್ಧ ಗಂಟೆಯಲ್ಲೇ, ಅಂದರೆ ರಾತ್ರಿ 10:30ಗೆ ಡೆಲಿವರಿ ಬಾಯ್ ಮನೆ ಬಾಗಿಲಿಗೆ ಬಂದಿದ್ದಾರೆ. ಆದರೆ ಸಾಮಾನ್ಯವಾಗಿ ಎಲ್ಲರೂ ಮಾಡುವಂತೆ ಅವರು ಮನೆಯ ಡೋರ್ ಬೆಲ್ (Doorbell) ಬಾರಿಸಲಿಲ್ಲ. ಬದಲಿಗೆ ನಿವೇದಿತಾ ಅವರ ಮೊಬೈಲ್‌ಗೆ ಕರೆ ಮಾಡಿ, “ಮೇಡಂ, ದಯವಿಟ್ಟು ಬಾಗಿಲು ತೆರೆಯಿರಿ” ಎಂದು ವಿನಯದಿಂದ ಕೇಳಿಕೊಂಡಿದ್ದಾರೆ.

ಹೊರಗೆ ಬಂದ ನಿವೇದಿತಾ ಅವರಿಗೆ ಆಶ್ಚರ್ಯವಾಗಿ, “ಬೆಲ್ ಒತ್ತುವ ಬದಲು ಕಾಲ್ ಯಾಕೆ ಮಾಡಿದ್ರಿ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆ ಡೆಲಿವರಿ ಎಕ್ಸಿಕ್ಯೂಟಿವ್ ನೀಡಿದ ಉತ್ತರ ಪ್ರತಿಯೊಬ್ಬರ ಮನ ಮುಟ್ಟುವಂತಿತ್ತು. ನಿವೇದಿತಾ ಅವರ ಪ್ರಶ್ನೆಗೆ ಮುಗುಳ್ನಗುತ್ತಲೇ ಉತ್ತರಿಸಿದ ಡೆಲಿವರಿ ಏಜೆಂಟ್:

“ಮೇಡಂ, ನೀವು ಆರ್ಡರ್ ಮಾಡಿದ್ದು ಡೈಪರ್. ಹಾಗಾಗಿ ಮನೆಯಲ್ಲಿ ಸಣ್ಣ ಮಗು ಇರಲೇಬೇಕು. ಈಗ ರಾತ್ರಿ 10:30 ಆಗಿರುವುದರಿಂದ ಮಗು ಮಲಗಿರಬಹುದು ಅನಿಸಿತು. ನಾನು ಬೆಲ್ ಒತ್ತಿದರೆ ಆ ಶಬ್ದಕ್ಕೆ ಮಗುವಿನ ನಿದ್ರೆ ಹಾಳಾಗಬಾರದು ಎಂದು ಕಾಲ್ ಮಾಡಿದೆ.” ಎಂದೂ ಮುಖ ನೋಡದ, ತಾನು ಯಾರೋ ತಿಳಿಯದ ಮಗುವಿನ ನೆಮ್ಮದಿಯ ನಿದ್ರೆಯ ಬಗ್ಗೆ ಯೋಚಿಸಿದ ಆ ಡೆಲಿವರಿ ಸಿಬ್ಬಂದಿಯ ಕಾಳಜಿ ನಿವೇದಿತಾ ಅವರ ಮನಸ್ಸನ್ನು ಸಂಪೂರ್ಣವಾಗಿ ಕರಗಿಸಿತು.

ಈ ಹೃದಯಸ್ಪರ್ಶಿ ಘಟನೆಯನ್ನು ನಿವೇದಿತಾ ರೈ ಅವರು “ಇದು ನನ್ನ ಜೀವನದ ಅತ್ಯಂತ ಸಿಹಿಯಾದ ಡೆಲಿವರಿ ಅನುಭವ” (The sweetest delivery experience) ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.

“ತಮ್ಮದೇ ಗಡಿಬಿಡಿಯಲ್ಲಿ ಪರರ ಕಾಳಜಿಯನ್ನೇ ಮರೆಯುತ್ತಿರುವ ಈ ಯುಗದಲ್ಲಿ, ತನಗೆ ತಿಳಿಯದ ಮಗುವಿಗಾಗಿ ಆತ ತೋರಿದ ಸಮಯಪ್ರಜ್ಞೆ ನಿಜಕ್ಕೂ ಹೆಮ್ಮೆ ತರುವಂತದ್ದು. ಇಂತಹ ಸಣ್ಣ ಅಪರೂಪದ ಮಾನವೀಯತೆಗಳೇ ಜೀವನದ ಸಿಹಿ ನೆನಪುಗಳು,” ಎಂದು ಅವರು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ಕಾಮೆಂಟ್ ಮಾಡಿ ಡೆಲಿವರಿ ಬಾಯ್‌ನ ಜಾಣ್ಮೆ, ತಾಳ್ಮೆ ಮತ್ತು ಕಸ್ಟಮರ್ ಕೇರಿಂಗ್ ಅನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ. “ಇಂತಹ ಸಣ್ಣ ಕಾಳಜಿಗಳೇ ಮಾನವೀಯತೆಯನ್ನು ಜೀವಂತವಾಗಿಟ್ಟಿರುವುದು,” ಎಂದು ಹಲವರು ಬರೆದುಕೊಂಡಿದ್ದಾರೆ.

BengaluruNews

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.