ಮಂತ್ರಾಲಯದ ಬಳಿ ಭೀಕರ ಅಪಘಾತ: ಮಂಗಳೂರು ಹಾಪ್‌ಕಾಮ್ಸ್ GM ರವಿಶೆಟ್ಟಿ ದುರಂತ ಸಾವು, ಮೂವರಿಗೆ ಗಂಭೀರ ಗಾಯ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಮಂಗಳೂರಿನಿಂದ ಹೊರಟಿದ್ದ ಭಕ್ತರಿದ್ದ ಕಾರು ಭೀಕರ ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ಮಂಗಳವಾರ ನಸುಕಿನ ಜಾವ (ಜುಲೈ 21) ನಡೆದಿದೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಮಂಗಳೂರಿನಿಂದ ಹೊರಟಿದ್ದ ಭಕ್ತರಿದ್ದ ಕಾರು ಭೀಕರ ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ಮಂಗಳವಾರ ನಸುಕಿನ ಜಾವ (ಜುಲೈ 21) ನಡೆದಿದೆ. ಈ ದಾರುಣ ಘಟನೆಯಲ್ಲಿ ಮಂಗಳೂರು ಮೂಲದ ಹಾಪ್‌ಕಾಮ್ಸ್ ಪ್ರಧಾನ ವ್ಯವಸ್ಥಾಪಕ (GM) ರವಿಶೆಟ್ಟಿ (53) ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ಆಗಿದ್ದ ರವಿಶೆಟ್ಟಿ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ಮುಂಜಾನೆ ಮಂತ್ರಾಲಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಲ್ವರ್ಟ್‌ಗೆ (ಡಿವೈಡರ್) ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವದಿಂದ ರವಿಶೆಟ್ಟಿ ಅವರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ ಹಾಗೂ ಸಿಎ ಸುಧೇಶ್ ರೈ ಅವರಿಗೆ ತೀವ್ರ ಗಾಯಗಳಾಗಿವೆ. ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳೀಯರು, ನಜ್ಜುಗುಜ್ಜಾಗಿದ್ದ ಕಾರಿನಿಂದ ಗಾಯಾಳುಗಳನ್ನು ಹೊರತೆಗೆಯಲು ನೆರವಾಗಿದ್ದಾರೆ. ಬಳಿಕ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ವಿಷಯ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಚಾಲಕನ ನಿಯಂತ್ರಣ ತಪ್ಪಲು ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

