ದೇಹಕ್ಕೆ ಕೊಬ್ಬು ಬೇಕೇ ಅಥವಾ ಬೇಡವೇ ? ತುಪ್ಪ, ಎಣ್ಣೆ ಸಂಪೂರ್ಣ ತ್ಯಜಿಸುವ ಮೊದಲು ತಜ್ಞರು ಹೇಳುವುದನ್ನೊಮ್ಮೆ ಕೇಳಿ

ಅತಿಯಾದ ಕೊಬ್ಬು ದೇಹಕ್ಕೆ ಸೇರಿ ಮಧುಮೇಹ, ಹೃದಯ ಕಾಯಿಲೆಗಳನ್ನು ಉಂಟುಮಾಡುತ್ತಿದೆ. ಹಾಗಾದರೆ ಕೊಬ್ಬುಗಳು ದೇಹದ ಆರೋಗ್ಯಕ್ಕೆ ಹಾನಿಕಾರಕವೇ? ದೇಹಕ್ಕೆ ಕೊಬ್ಬುಗಳು ಅವಶ್ಯಕತೆಯೇ ಇಲ್ಲವೇ? ಇಲ್ಲಿದೆ ಉತ್ತರ.

ಕಳೆದ ಕೆಲವು ದಶಕಗಳಿಂದೀಚೆಗೆ ಭಾರತೀಯರ ಆಹಾರ ಪದ್ಧತಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆಯಾಗಿವೆ. ಒಂದು ಕಾಲದಲ್ಲಿ ಮನೆಯಲ್ಲಿಯೇ ಸಾಂಪ್ರದಾಯಿಕವಾಗಿ ಆಹಾರಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ರೆಡಿ–ಟು–ಈಟ್‌ ಫುಡ್‌ಗಳು, ಆನ್‌ಲೈನ್‌ ಆಹಾರಗಳು, ಪ್ಯಾಕೆಟ್‌ ತಿಂಡಿಗಳು ಎಲ್ಲಡೆ ಕಾಣಸಿಗುತ್ತವೆ. ಈ ಬದಲಾವಣೆಯಿಂದಾಗಿ ಆಹಾರದಲ್ಲಿ ಬಳಕೆಯಾಗುವ ಎಣ್ಣೆಯ ಗುಣಮಟ್ಟ ಮತ್ತು ಪ್ರಮಾಣದಿಂದಾಗಿ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅತಿಯಾದ ಕೊಬ್ಬು ದೇಹಕ್ಕೆ ಸೇರಿ ಮಧುಮೇಹ, ಹೃದಯ ಕಾಯಿಲೆಗಳನ್ನು ಉಂಟುಮಾಡುತ್ತಿದೆ. ಹಾಗಾದರೆ ಕೊಬ್ಬುಗಳು ದೇಹದ ಆರೋಗ್ಯಕ್ಕೆ ಹಾನಿಕಾರಕವೇ? ದೇಹಕ್ಕೆ ಕೊಬ್ಬುಗಳು ಅವಶ್ಯಕತೆಯೇ ಇಲ್ಲವೇ? ಈ ಪ್ರಶ್ನೆ ಬಹಳಷ್ಟು ಜನರನ್ನು ಕಾಡುತ್ತಿದೆ. ಜೊತೆಗೆ ದೇಹದ ತೂಕ ಹೆಚ್ಚಾಗುತ್ತದೆ ಎಂದು ಬಹಳಷ್ಟು ಜನರು ಎಲ್ಲಾ ರೀತಿಯ ಕೊಬ್ಬುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬಿಟ್ಟಿದ್ದಾರೆ. ಆದರೆ ಆದರೆ ತಜ್ಞರು ಹೇಳುವ ಪ್ರಕಾರ ದೇಹಕ್ಕೆ ಕೊಬ್ಬುಗಳು ಅತ್ಯಂತ ಅವಶ್ಯಕ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾದರೆ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದೂ ಅವರು ಸೂಚಿಸುತ್ತಾರೆ. ಹಾಗಾದರೆ ಕೊಬ್ಬು ದೇಹಕ್ಕೆ ಅಷ್ಟು ಅಗತ್ಯವೇ? ಯಾವ ರೀತಿಯ ಕೊಬ್ಬುಗಳನ್ನು ಸೇವಿಸಬೇಕು ಎಂದು ನೋಡೋಣ.

ಕೊಬ್ಬಿನಲ್ಲಿದೆ ಹಲವು ವಿಧ

ಕೊಬ್ಬಿನಲ್ಲಿ ಎರಡು ವಿಧ. ಸ್ಯಾಚುರೇಟೆಡ್‌ ಕೊಬ್ಬು ಮತ್ತು ಅನ್‌ಸ್ಯಾಚುರೇಟೆಡ್‌ ಕೊಬ್ಬು. ಈ ಎರಡೂ ರೀತಿಯ ಕೊಬ್ಬುಗಳು ದೇಹಕ್ಕೆ ಅಗತ್ಯ. ಇವು ಚಯಾಪಚಯ ಕ್ರಿಯೆಗೆ ಪ್ರಯೋಜನಕಾರಿ. ಅನೇಕ ಅಡುಗೆ ಎಣ್ಣೆಗಳು ಕ್ಯಾರೊಟಿನಾಯ್ಡ್‌ಗಳು, ಟೋಕೋಫೆರಾಲ್‌ಗಳು, ಟೋಕೋಟ್ರಿಯೆನಾಲ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ಯಾಚುರೇಟೆಡ್‌ ಕೊಬ್ಬು ತುಪ್ಪ, ಬೆಣ್ಣೆ, ಮಾಂಸ ಮುಂತಾದವುಗಳಲ್ಲಿ ಇರುತ್ತದೆ. ಇವು ಸಮತೋಲಿತ ಆಹಾರ ಭಾಗವಾಗಿದೆ. ಕೊಬ್ಬುಗಳು ದೇಹದ ಜೀವಕೋಶಗಳ ರಚನೆ ಮತ್ತು ಮರು ಸ್ಥಾಪನೆಗೆ ಬಹಳ ಮುಖ್ಯವಾಗಿದೆ.

ಯಾವ ಕೊಬ್ಬು ಅಪಾಯಕಾರಿ?

ಕೈಗಾರಿಕೆಗಳಲ್ಲಿ ತಯಾರಾಗುವ ಟ್ರಾನ್ಸ್‌ ಕೊಬ್ಬುಗಳು ಅತ್ಯಂತ ಅಪಾಯಕಾರಿ. ಏಕೆಂದರೆ ಅದು ಭಾಗಶಃ ಹೈಡ್ರೋಜನಕೀಕರಣ ಪ್ರಕ್ರಿಯೆಯಡಿ ತಯಾರಿಸಿದ್ದಾಗಿವೆ. ಅವು ರಕ್ತದಲ್ಲಿನ ಕೊಬ್ಬಿನ ಸಮತೋಲನವನ್ನು ಅಡ್ಡಿಪಡಿಸುತ್ತವೆ, ರಕ್ತನಾಳಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಹೃದಯ ಕಾಯಿಲೆ ಮತ್ತು ಮಧುಮೇಹದಂತಹ ಸಮಸ್ಯೆಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ಮಿತಿಗಳಲ್ಲಿ ಸೇವಿಸಿದರೆ ಈ ಕೊಬ್ಬುಗಳಿಂದ ಯಾವುದೇ ಅಪಾಯವಿಲ್ಲ.

ಇದನ್ನೂ ಓದಿ: ಹಾರ್ಮೋನ್ ಬ್ಯಾಲೆನ್ಸ್ ತಪ್ಪಿ ಋತುಚಕ್ರ ವಿಳಂಬವಾಗುತ್ತಿದ್ದರೆ ತಕ್ಷಣ ಮಾತ್ರೆ ನುಂಗುವ ಮುನ್ನ ಈ ಮನೆಮದ್ದು ಟ್ರೈ ಮಾಡಿ

ಅಡುಗೆಯಲ್ಲಿ ಯಾವ ರೀತಿಯ ಎಣ್ಣೆ ಬಳಸುವುದು ಸೂಕ್ತ?

ತಜ್ಞರ ಪ್ರಕಾರ ಪ್ರಾದೇಶಿಕ ಅಡುಗೆ ಎಣ್ಣೆಗಳನ್ನು ಬಳಸುವುದು ಉತ್ತಮ. ಮೊದಲು ಭಾರತದ ಉತ್ತರ ಮತ್ತು ಪೂರ್ವದಲ್ಲಿ ಸಾಸಿವೆ ಎಣ್ಣೆ, ಪಶ್ಚಿಮದಲ್ಲಿ ಕಡಲೆಕಾಯಿ ಎಣ್ಣೆ, ದಕ್ಷಿಣದಲ್ಲಿ ತೆಂಗಿನ ಎಣ್ಣೆ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಬಳಸುತ್ತಿದ್ದರು. ಪ್ರಾದೇಶಕ ಹವಾನಕ್ಕೆ ಅನುಗುಣವಾಗಿ ಅಡುಗೆಯೆಣ್ಣೆಯನ್ನು ಬಳಕೆ ಮಾಡುತ್ತಿದ್ದರು. ಅದರಿಂದ ದೇಹಕ್ಕೆ ಅಗತ್ಯ ಕೊಬ್ಬಿನಾಮ್ಲಗಳು ದೊರೆಯುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತಿತ್ತು. ಹಾಗಾಗಿ ನೀವು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಕೊಬ್ಬುಗಳನ್ನು ಸೇವಿಸುವುದು ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗವಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.