ಕರ್ನಾಟಕದಲ್ಲಿ ಮತ್ತೆ ಶುರು ಸಂಪುಟ ಸರ್ಕಸ್ : ಮುಂದಿನ ವಾರ ಸಂಪುಟ ವಿಸ್ತರಣೆ ಫಿಕ್ಸ್
ದೆಹಲಿಯ ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಮಾತು ಬೇಡ ಎಂದು ಹೈಕಮಾಂಡ್ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಬೆಳವಣಿಗೆ ಸಂಭವಿಸಿರಲಿಲ್ಲ.

ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ, ದೆಹಲಿಯಲ್ಲಿ ಕಾಕ್ರೋಚ್ ಪ್ರತಿಭಟನೆಯ ಕಾವು ತಣ್ಣಗಾಗಿದೆ. ಆದರೆ ಇತ್ತ ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಕಾವು ಪುನಃ ಜೋರಾಗಿದೆ. ಜಿರಳೆ ಕಾಟದಿಂದಾಗಿ ಕಳೆದೊಂದು ವಾರದಿಂದ ಮೌನವಾಗಿದ್ದ ಸಂಪುಟ ವಿಸ್ತರಣೆ ಸರ್ಕಸ್ ಇದೀಗ ಮತ್ತೆ ಮುನ್ನಲೆಗೆ ಬಂದಿದೆ .
ದೆಹಲಿಯ ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಮಾತು ಬೇಡ ಎಂದು ಹೈಕಮಾಂಡ್ ತಾಕೀತು ಮಾಡಿದ್ದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಯಾವುದೇ ರಾಜಕೀಯ ಬೆಳವಣಿಗೆ ಸಂಭವಿಸಿರಲಿಲ್ಲ. ಆದರೆ ಇದೀಗ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನಾಳೆ ಅಥವಾ ನಾಡಿದ್ದು ದೆಹಲಿಯಲ್ಲಿ ಹೈಕಮಾಂಡ್ ಜೊತೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದು, ಈ ಸಭೆಯಲ್ಲಿ ರಾಜ್ಯ ಸಂಪುಟ ಸದಸ್ಯರ ಅಂತಿಮ ಪಟ್ಟಿ ಹೊರಬೀಳಲಿದೆ ಎನ್ನಲಾಗಿದೆ.
ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಈ ಸಭೆಯಲ್ಲಿ ತಾಳಮೇಳ ಸರಿಯಾಗಿ ಕೂಡಿಬಂದಲ್ಲಿ, ಬುಧವಾರದಂದು ಸಂಪುಟ ವಿಸ್ತರಣೆ ಪ್ರಕ್ರಿಯೆ ರಾಜ್ಯದಲ್ಲಿ ನಡೆಯಲಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್ಗೆ ಸಂಪುಟ ವಿಸ್ತರಣೆಯಲ್ಲಿ ಈ ಹಿಂದೆ ಸಿದ್ದರಾಮ್ಯಯ ಅವರಿಗೆ ನೀಡಿದ್ದ ಸ್ವಾತಂತ್ರ್ಯವನ್ನು ಹೈಕಮಾಂಡ್ ನೀಡುತ್ತಿಲ್ಲ ಎನ್ನಲಾಗಿದೆ.
ಈಗಾಗಲೇ ಸಚಿವರ ಸಂಭಾವ್ಯ ಪಟ್ಟಿಯ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿ ಬರ್ತಾ ಇದ್ದು ತಾರ್ಕಿಕ ಅಂತ್ಯಕ್ಕಾಗಿ ಹೈ ವೋಲ್ಟೇಜ್ ಸಭೆ ಆಯೋಜಿಸಲಾಗಿದೆ. ಈಗಾಗಲೇ ಸಿಎಂ ಬದಲಾವಣೆಯ ರಿಸ್ಕ್ ತೆಗೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ತನ್ನ ಮತಬ್ಯಾಂಕ್ಗೆ ತೊಂದರೆಯಾಗದಂತೆ ಸಚಿವ ಸ್ಥಾನ ಹಂಚಿಕೆ ಮಾಡಬೇಕೆಂದು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಪ್ರಾದೇಶಿಕ ಅಸಮಾನತೆ, ವಿವಿಧ ಸಮುದಾಯಗಳಿಗೆ ತೃಪ್ತಿ ಆಗುವಂತಹ ಮದ್ದು ಅರಿಯಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವಾಗಿದೆ. ಹೀಗಾಗಿ ಯಾರಿಗೆಲ್ಲಾ ಸಚಿವ ಸ್ಥಾನದ ಭಾಗ್ಯ ಒಲಿಯಲಿದೆ ? ಯಾರಿಗೆಲ್ಲ ನಿರಾಶೆ ಕಾದಿದೆ ಎಂಬುದಕ್ಕೆ ಬಹುತೇಕ ಮುಂದಿನ ವಾರ ತೆರೆ ಬೀಳಲಿದೆ.
cabinet expansion Karnataka in Next week

