Dates Farming : ಕನ್ನಡ ನಾಡಲ್ಲಿ ಮರಳುಗಾಡಿನ ಕರ್ಜೂರ ಬೆಳೆದ ಅನ್ನದಾತ

0

ನೋಡೋಕೆ ಥೇಟು ಈಚಲು ಮರದಂತೆ ಕಾಣೋ ಇವು ಖರ್ಜೂರದ ಮರಗಳು. ದೇಶ ವಿದೇಶದ ಮಾರುಕಟ್ಟೆಯಲ್ಲಿ ಖರ್ಜೂರಕ್ಕೆ ಭಾರಿ ಡಿಮ್ಯಾಂಡ್ ಇದೆ. ಮರಳುಗಾಡಿನ ಪ್ರದೇಶಗಳಲ್ಲಿ ಬೆಳೆಯಬಹುದಾದ ಈ ಬೆಳೆಯನ್ನ ನಮ್ಮ ನೆಲದಲ್ಲೂ ಬೆಳೆಯಬಹುದು. ಇದನ್ನ ಬೆಳೆದು ಸೈ ಅನ್ನಿಸಿಕೊಂಡಿದ್ದಾರೆ ಗೌರಿಬಿದನೂರಿನ ರೈತ ದಿವಾಕರ್.

ನಿಜಕ್ಕೂ ಅಚ್ಚರಿ ಅನ್ನಿಸಿದ್ರು ಸತ್ಯ. ಇಂತಹದ್ದೊಂದು ಖರ್ಜೂರ ಕೃಷಿ ಮಾಡುತ್ತ ಯಶಸ್ಸುಗಳಿಸಿರೋ ರೈತನ ಸಾಧನೆಗೊಂದು ಸಲಾಂ. ಕೃಷಿ ಅಂದ್ರೆ ಏನು ಅಂತಲೇ ಗೊತ್ತಿಲ್ಲದ ಆತ ಡಬ್ಬಲ್ ಡಿಗ್ರಿ ಹೋಲ್ಡರ್. ಕೃಷಿಯಲ್ಲೇ ಏನಾದ್ರೂ ಸಾಧನೆ ಮಾಡ್ಬೇಕು ಅಂದುಕೊಂಡವರಿಗೆ ಜಪಾನಿನ ಲೇಖಕ ಬರೆದಿದ್ದ ಒಂದು ಹುಲ್ಲಿನ ಕ್ರಾಂತಿ ಪುಸ್ತಕ ಪ್ರಭಾವ ಬೀರಿತ್ತು. ತುಮಕೂರು ವಿಶ್ವವಿದ್ಯಾಲಯದಲ್ಲಿದ್ದ ನೌಕರಿ ಬಿಟ್ಟು ಊರಿಗೆ ವಾಪಸ್ಸಾದ್ರು. ವ್ಯವಸಾಯವನ್ನೇ ಜೀವನ ಮಾಡಿಕೊಂಡ್ರು. ತಮಿಳುನಾಡಿನ ರೈತರೊಬ್ಬರು ಖರ್ಜೂರ ಬೆಳೆದಿರೋದರ ಬಗ್ಗೆ ಮಾಹಿತಿ ಕಲೆ ಹಾಕಿ ಖರ್ಜೂರ ಬೆಳೆಯೋಕೆ ನಿರ್ಧರಿಸಿದ್ರು.

ಈ ಬೆಳೆಗೆ ನಿರ್ಧಿಷ್ಟವಾದ ವಾತವರಣ ಇರಲೇಬೇಕು. ಎಲ್ಲೆಂದರಲ್ಲಿ ಖರ್ಜೂರ ಬೆಳೆಯೋದು ಅಸಾಧ್ಯ. ಆದ್ರೂ ಇವರು ಬೆಳೆಯೋಕೆ ಮುಂದಾದ್ರು. ಊರ ಜನ ಹುಚ್ಚ ಅಂದ್ರು.. ಆದ್ರೂ ತಲೆ ಕಡೆಸಿಕೊಳ್ಳದೆ ಸಾಧನೆಗೆ ಮುಂದಾದ್ರು. ತಮಿಳುನಾಡಿನ ರೈತನನ್ನ ಸಂಪರ್ಕಿಸಿ ಸುಮಾರು 150 ಗಿಡಗಳನ್ನ ತಂದ್ರು. ಒಂದು ಗಿಡಕ್ಕೆ ಇವರು ತೆತ್ತ ಬೆಲೆ ಮೂರು ಸಾವಿರ ರೂಪಾಯಿ. 25 ಅಡಿ ಅಂತರದ ಸಾಲು ಮಾಡಿ ಸಸಿಗಳನ್ನ ನಾಟಿ ಮಾಡಿದ್ರು.. ಮೊದ್ಲಿಗೆ ಎರಡು ಚದರ ಅಡಿ ಗುಂಡಿ ಹೊಡೆದು ಸುಮಾರು 20 ದಿನ ಬಿಟ್ರು. ನಂತ್ರ ಗುಂಡಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಹುಳಗಳ ಬಾಧೆ ಬಾರದಿರಲಿ ಅಂತ ಕತ್ತಾಳೆ ಎಲೆಗಳನ್ನ ಅದರೊಳಗೆ ಹಾಕಿ ಸಸಿ ನೆಟ್ರು.

ಖರ್ಜೂರ ಗಿಡಗಳ ವಿಶೇಷತೆ ಏನಪ್ಪ ಅಂದ್ರೆ ಇವುಗಳಲ್ಲಿ ಗಂಡು ಮತ್ತು ಹೆಣ್ಣು ಗಿಡಗಳು ಇರ್ತವೆ. ಹತ್ತು ಗಂಡು ಗಿಡಗಳಿಗೆ ಐವತ್ತು ಹೆಣ್ಣು ಗಿಡಗಳನ್ನ ನಡಬೇಕಾಗುತ್ತದೆ. ಪರಾಗಸ್ಪರ್ಶ ಮುಖೇನ ಹೆಣ್ಣು ಗಿಡಗಳಲ್ಲಿ ಹೊಂಬಾಳೆ ಮೂಡುತ್ತದೆ. ಹೆಣ್ಣು ಗಿಡಗಳಲ್ಲಿ ಮಾತ್ರ ಕಾಯಿ ಸಿಗುತ್ತವೆ. ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಇಳುವರಿ ಲಭ್ಯ. ಸುಮಾರು 50 ರಿಂದ 60 ವರ್ಷದವರೆಗೂ ಫಸಲನ್ನು ಪಡೆಯಬಹುದು.ಗಿಡಕ್ಕೆ ಅಗತ್ಯವಾದ ಜೀವಾಮೃತ, ಬೇವಿನ ಹಿಂಡಿ, ಬೇವಿನ ಸೊಪ್ಪಿನ ಮುಚ್ಚಳಿಕೆ ನೀಡೋದ್ರಿಂದ ಗಿಡಗಳಿಗೆ ಕೀಟ ಭಾದೆ ತಗಲೋದಿಲ್ಲ. ಕಾಲಕಾಲಕ್ಕೆ ಪಾತಿ ಮಾಡಿ ಕಳೆ ನಿವಾರಣೆ ಮಾಡಿದ್ರೆ ಸಾಕು. ನೂರು ಗಿಡಗಳಿದ್ದಲ್ಲಿ ಒಂದೂವರೆ ಟನ್ ಇಳುವರಿ ಸಾಧ್ಯ.

ಗಳಿಸೋ ಆದಾಯ ಆರರಿಂದ ಹತ್ತು ಲಕ್ಷ ರೂಪಾಯಿ. ಭೂಮಿ ಮೇಲೆ ನಂಬಿಕೆ ಇಟ್ಟು ಕೃಷಿ ಮಾಡಿದ್ರೆ ಯಶಸ್ಸು ಗ್ಯಾರಂಟಿ ಅನ್ನೋದಿಕ್ಕೆ ರೈತ ದಿವಾಕರ್ ಸಾಕ್ಷಿ. ಸಾಧಿಸೋ ಛಲ ಇದ್ರೆ ಬಂಡೆಯಲ್ಲೂ ನೀರು ತೆಗೆಯಬಹುದು..ಏನಂತ್ತೀರಾ..?

Leave A Reply

Your email address will not be published.