ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ : ರೈತರಿಗೂ ತಟ್ಟಿದ ಯುದ್ಧದ ಬಿಸಿ..!
ರೈತರು ರಸಗೊಬ್ಬರ ಖರೀದಿಸುವಾಗ ತಮ್ಮ ಎಫ್‌ಐಡಿ ತೋರಿಸುವುದು ಕಡ್ಡಾಯವಾಗಿದೆ. ರಸಗೊಬ್ಬರ ಅಭಾವ ಸೃಷ್ಟಿಯಾಗದಂತೆ ತಡೆಯಲು ಸರ್ಕಾರದ ಮುಂಜಾಗ್ರತಾ ಕ್ರಮ.
ಮಧ್ಯಪ್ರಾಚ್ಯದಲ್ಲಿ ಸಂಭವಿಸುತ್ತಿರುವ ಯುದ್ಧದ ಭೀತಿ ರಾಜ್ಯದ ರೈತರಿಗೂ ತಟ್ಟಿದೆ . ರಾಜ್ಯದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಕೃತಕ ಅಭಾವ ತಡೆಗಟ್ಟಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸುವಾಗ ತಮ್ಮ ಎಫ್‌ಐಡಿ ತೋರಿಸುವುದು ಕಡ್ಡಾಯವಾಗಿದೆ.
ಪ್ರಸ್ತುತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ರಸಗೊಬ್ಬರ ತಯಾರಿಕೆಗೆ ಬೇಕಾದ ಯೂರಿಯಾ ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ ಆಮದಿನಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ರಸಗೊಬ್ಬರದ ಬೆಲೆ ಏರಿಕೆ ಅಥವಾ ಅಭಾವ ಸೃಷ್ಟಿಯಾಗದಂತೆ ತಡೆಯಲು ಸರ್ಕಾರ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ತಮ್ಮ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ, ಅವಶ್ಯಕತೆ ಇದ್ದಷ್ಟೇ ಗೊಬ್ಬರವನ್ನು ಪಡೆಯುವಂತೆ ಮಾಡಲು ಸರ್ಕಾರ ಮುಂದಾಗಿದೆ. ನಿಜವಾದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಸಿಗುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ಗೃಹಜ್ಯೋತಿ ಬಳಕೆದಾರರಿಗೆ ಗುಡ್ನ್ಯೂಸ್ : ಮನೆ ಶಿಫ್ಟ್ ಮಾಡಿದರೂ ಇಲ್ಲ ಯಾವುದೇ ತೊಂದರೆ
ಇನ್ಮುಂದೆ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ತೆರಳುವಾಗ ರೈತರು ತಮ್ಮ ಗುರುತಿನ ಚೀಟಿಯಾದ ‘ಎಫ್‌ಐಡಿ’ ಸಂಖ್ಯೆಯನ್ನು ಮರೆಯದೇ ಕೊಂಡೊಯ್ಯಬೇಕು. ಎಫ್‌ಐಡಿ ಇಲ್ಲದಿದ್ದರೆ ಗೊಬ್ಬರ ವಿತರಣೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇರುತ್ತದೆ.ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರಕ್ಕೆ ಬೇಕಾದ ಗ್ಯಾಸ್ ಹಾಗೂ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಕುಂಠಿತ ಉಂಟಾಗಿರುವುದರಿಂದ, ರೈತರು ಸಹಕಾರ ನೀಡಬೇಕು ಮತ್ತು ರಸಗೊಬ್ಬರವನ್ನು ಮಿತವಾಗಿ ಬಳಸಬೇಕು ಎಂದು ಕೃಷಿ ಇಲಾಖೆ ಆಶಯ ವ್ಯಕ್ತಪಡಿಸಿದೆ.



