ಮಧುಮೇಹಿಗಳು ದಿನಕ್ಕೆ ಎಷ್ಟು ಮಾವು ತಿನ್ನಬಹುದು? ವೈದ್ಯರ ಈ ಸಲಹೆ ತಿಳಿಯಿರಿ
ಹಣ್ಣುಗಳ ರಾಜ ಮಾವು ಸಾಮಾನ್ಯವಾಗಿ ಎಲ್ಲರ ಅಚ್ಚುಮೆಚ್ಚಿನ ಹಣ್ಣು. ರುಚಿಯಾದ ರಸಭರಿತ ಹಣ್ಣು ಎದುರಿಗಿದ್ದರೆ ತಿನ್ನದೇ ಹಾಗೆ ಇರಲು ಸಾಧ್ಯವೇ? ಇಲ್ಲ, ಆದರೆ ಮಧುಮೇಹಿಗಳು ಏನು ಮಾಡಬೇಕು? ವೈದ್ಯರು ಕೊಟ್ಟ ಈ ಸಲಹೆ ಪಾಲಿಸಿ ನಿಶ್ಚಿಂತೆಯಿಂದ ಮಾವು ಸವಿಯಿರಿ.
ಭಾರತದಲ್ಲಿ ಈಗ ಎಲ್ಲೆಲ್ಲೂ ಮಾವಿನ ಹಣ್ಣುಗಳ ಘಮ. ರಸಭರಿತ ವಿವಿಧ ರುಚಿಯ ಮಾವು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಒಂದೊಂದು ಜಾತಿಯ ಮಾವು ಒಂದೊಂದು ಬಗೆಯ ಪರಿಮಳ, ಸ್ವಾದ ಹೊಂದಿರುತ್ತದೆ. ಮಾವಿನ ಸೀಸನ್‌ಗಾಗಿಯೇ ಕಾತುರದಿಂದ ಕಾಯುವ ಜನರೂ ಇದ್ದಾರೆ. ಆದರೆ ಮಾವಿನ ಹಣ್ಣು ಅತ್ಯಂತ ಸಿಹಿಯಾದ ಹಣ್ಣು. ಹಾಗಾಗಿ ಮಧುಮೇಹಿಗಳು ಎಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದೋ ಎಂದ ತಿನ್ನಲು ಭಯಪಡತ್ತಾರೆ. ತಮಗಿಷ್ಟವಾದ ಹಣ್ಣನ್ನು ತಿನ್ನಲು ಯೋಚಿಸುತ್ತಾರೆ. ಆದರೆ ವೈದ್ಯರ ಪ್ರಕಾರ ಮಧುಮೇಹಿಗಳು ಮಾವನ್ನು ಸವಿಯಬಹುದು. ಹೇಗೆ ಎಂದರೆ ಅದಕ್ಕೊಂದು ಕ್ರಮವಿದೆ. ಅದನ್ನು ಪಾಲಿಸುವುದರಿಂದ ಮಧುಮೇಹವೂ ಹೆಚ್ಚಾಗುವುದಿಲ್ಲ, ಹಣ್ಣನ್ನು ಸವಿಯಬಹುದು. ಹಾಗಾದರೆ ಆ ಕ್ರಮವೇನು? ದಿನವೊಂದಕ್ಕೆ ಎಷ್ಟು ಮಾವಿನಹಣ್ಣು ತಿನ್ನಬಹುದು ಇಲ್ಲಿದೆ ಓದಿ.
ಮಾವು ಒಂದು ಪೌಷ್ಟಿಕ ಹಣ್ಣು
ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಅನೇಕ ಖನಿಜ, ಜೀವಸತ್ವಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್ ಎ, ಸಿ, ಇ, ಕೆ, ಫೋಲೆಟ್, ಪೊಟ್ಯಾಸಿಯಮ್, ಮೆಗ್ನೇಸಿಯಮ್ ಮತ್ತು ಫೈಬರ್ ಹೇರಳವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಮಾವು ಸವಿಯುವುದರಿಂದ ಸಿಗುವ ಪ್ರಯೋಜನವೇನು?
ಮಾವು ರುಚಿಯಾಗಿರುವುದರ ಜೊತೆಗೆ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ಬೇಸಿಗೆಯಲ್ಲಿ ದೇಹದ ನಿರ್ಜಲೀಕರಣವನ್ನು ಹೋಗಲಾಡಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹಕ್ಕೆ ತ್ವರಿತ ಶಕ್ತಿ ಒದಗಿಸುತ್ತದೆ. ಇದರಲ್ಲಿರುವ ಉತ್ಕರ್ಷಣಾ ನಿರೋಧಕಗಳು ಜೀವಕೋಶಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ.
ಮಾವು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ?
ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಉಳಿದ ಹಣ್ಣುಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿರುತ್ತದೆ. ಜೊತೆಗೆ ಇದರ ಗ್ಲೈಸೆಮಿಕ್ ಸೂಚ್ಯಂಕವು ಸ್ವಲ್ಪ ಹೆಚ್ಚಿದೆ. ಆದ್ದರಿಂದ ಹೆಚ್ಚು ಮಾವು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ.
ಮಧುಮೇಹಿಗಳು ಹೇಗೆ ಮಾವು ಸೇವಿಸಬೇಕು?
ತಜ್ಞರ ಪ್ರಕಾರ ಮಧುಮೇಹಿಗಳು ದಿನದ ಎರಡು ದೊಡ್ಡ ಊಟದ ನಡುವಿನ ಸಮಯದಲ್ಲಿ ಮಾವಿನಹಣ್ಣನ್ನು ತಿಂಡಿಯ ರೂಪದಲ್ಲಿ ಸೇವಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ಮಾವಿನ ಹಣ್ಣಿನ ಜ್ಯೂಸ್‌ಗಿಂತ ಹಣ್ಣನ್ನು ತಿನ್ನುವುದು ಉತ್ತಮ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ ಮಾವು ನಾರಿನಾಂಶದಿಂದ ಕೂಡಿದೆ. ಇದು ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಸುತ್ತದೆ.
ಇದನ್ನೂ ಓದಿ: ಬರಿ 7 ದಿನ ಮಜ್ಜಿಗೆ ಕುಡಿದರೆ ದೇಹದಲ್ಲಿ ಆಗುವ ಬದಲಾವಣೆಗಳು ಏನು ಗೊತ್ತ?
ದಿನವೊಂದಕ್ಕೆ ಎಷ್ಟು ಮಾವು ತಿನ್ನಬಹುದು?
ಆರೋಗ್ಯ ತಜ್ಞರ ಪ್ರಕಾರ ಮಧುಮೇಹಿಗಳು ದಿನವೊಂದಕ್ಕೆ ಅರ್ಧ ಮಾವಿನ ಹಣ್ಣನ್ನು ಸೇವಿಸಬಹುದು. ಆರೋಗ್ಯವಂತ ವಯಸ್ಕರರು ದಿನಕ್ಕೆ 350ಗ್ರಾಂ ಹಣ್ಣು ತಿನ್ನಬಹುದು.
ಮಾವು ತಿನ್ನಲು ಸರಿಯಾದ ಸಮಯ ಯಾವುದು?
ಯಾವುದೇ ಕಾರಣಕ್ಕೂ ಮಧುಮೇಹಿಗಳು ಊಟದ ನಂತರ ಅಥವಾ ಮಲಗುವ ಮುನ್ನ ಮಾವಿನಹಣ್ಣನ್ನು ತಿನ್ನಲೇಬಾರದು. ಇದು ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿ ಮತ್ತು ಸಕ್ಕರೆ ಶೇಖರಣೆಗೆ ಕಾರಣವಾಗಬಹುದು. ಆದ್ದರಿಂದ ಮಾವಿನ ಹಣ್ಣನ್ನು ಬೆಳಿಗ್ಗೆ ಅಥವಾ ಸಂಜೆ ತಿಂಡಿಯಾಗಿ ತಿನ್ನುವುದು ಉತ್ತಮ.
ಮಾವಿನಹಣ್ಣನ್ನು ಈ ವಸ್ತುಗಳೊಂದಿಗೆ ಸೇವಿಸುವುದು ಉತ್ತಮ?
ಮಾವಿನಹಣ್ಣುಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡಲು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರಗಳೊಂದಿಗೆ ಸೇವಿಸಬಹುದು. ಬಾದಾಮಿ, ವಾಲ್ನಟ್ಸ್, ಹುರಿದ ಕಡಲೆ ಮತ್ತು ಮಖಾನಾ (ಕಮಲದ ಬೀಜ) ಗಳೊಂದಿಗೆ ಮಾವಿನಹಣ್ಣನ್ನು ಜೋಡಿಸಿ ತಿನ್ನಬಹುದು.



