ಜುಲೈನಲ್ಲಿ ಎರಡು ಹೈಬ್ರಿಡ್ ಎಸ್‌ಯುವಿ ಎಂಟ್ರಿ; ಖರೀದಿದಾರರಿಗೆ ಹೊಸ ಆಯ್ಕೆ

ಜುಲೈ ತಿಂಗಳಲ್ಲಿ ಭಾರತೀಯ ವಾಹನ ಮಾರುಕಟ್ಟೆಗೆ ಹೋಂಡಾ ಮತ್ತು ಎಂಜಿಯ ಎರಡು ಹೊಸ ಹೈಬ್ರಿಡ್ ಎಸ್‌ಯುವಿಗಳು ಆಗಮಿಸುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚಿನ ಮೈಲೇಜ್ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳಿಂದ ಗಮನ ಸೆಳೆಯಲಿವೆ.

ನವದೆಹಲಿ: ಜುಲೈ ತಿಂಗಳು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಸಂಚಲನ ತರಲಿದ್ದು, ಹೈಬ್ರಿಡ್ ಎಸ್‌ಯುವಿ ಖರೀದಿಸಲು ಕಾಯುತ್ತಿರುವವರಿಗೆ ಎರಡು ಹೊಸ ಆಯ್ಕೆಗಳು ಲಭ್ಯವಾಗಲಿವೆ. ಹೋಂಡಾ ಮತ್ತು ಎಂಜಿ ಮೋಟಾರ್ ಕಂಪನಿಗಳು ತಮ್ಮ ಹೊಸ ತಲೆಮಾರಿನ ಹೈಬ್ರಿಡ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಕಡಿಮೆ ಇಂಧನ ವೆಚ್ಚ ಹಾಗೂ ಉತ್ತಮ ಕಾರ್ಯಕ್ಷಮತೆ ನೀಡುವ ಹೈಬ್ರಿಡ್ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಕಂಪನಿಗಳು ಪ್ರೀಮಿಯಂ ವಿಭಾಗದಲ್ಲಿ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಲಿವೆ.

ಹೋಂಡಾ ZR V

ಹೋಂಡಾ ತನ್ನ ಹೊಸ ZR V ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಸಂಪೂರ್ಣ ನಿರ್ಮಿತ ವಾಹನ (CBU) ರೂಪದಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಇದರ ಬೆಲೆ ಸುಮಾರು ₹40 ಲಕ್ಷದಿಂದ ₹50 ಲಕ್ಷದ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.

ಈ ಎಸ್‌ಯುವಿಯಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಡ್ಯುಯಲ್ ಮೋಟಾರ್ ಸ್ಟ್ರಾಂಗ್ ಹೈಬ್ರಿಡ್ ವ್ಯವಸ್ಥೆ ಇರಲಿದೆ. ಇದು ಒಟ್ಟು 184 bhp ಶಕ್ತಿ ಮತ್ತು 315 Nm ಟಾರ್ಕ್ ಉತ್ಪಾದಿಸಲಿದೆ.

ಒಳಾಂಗಣದಲ್ಲಿ 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9 ಇಂಚಿನ ಟಚ್‌ಸ್ಕ್ರೀನ್, 12 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ. ಈ ಮಾದರಿ ಸ್ಕೋಡಾ ಕೊಡಿಯಾಕ್ ಹಾಗೂ ಜೀಪ್ ಮೆರಿಡಿಯನ್‌ಗೆ ಪೈಪೋಟಿ ನೀಡಲಿದೆ.

ಎಂಜಿ ಸ್ಟಾರ್‌ಲೈಟ್ 560

ಎಂಜಿ ಮೋಟಾರ್ ಇಂಡಿಯಾ ಜುಲೈ 16ರಂದು ತನ್ನ ಹೊಸ ಎನರ್ಜಿ ವಾಹನವನ್ನು ಅನಾವರಣಗೊಳಿಸಲಿದ್ದು, ಅದು ಸ್ಟಾರ್‌ಲೈಟ್ 560 ಪ್ಲಗ್ ಇನ್ ಹೈಬ್ರಿಡ್ ಎಸ್‌ಯುವಿ ಆಗಿರುವ ಸಾಧ್ಯತೆ ಇದೆ.

ಈ ವಾಹನದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 20.5 kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಒಟ್ಟಾರೆ ಇದು 195 bhp ಶಕ್ತಿ ಹಾಗೂ 230 Nm ಟಾರ್ಕ್ ಉತ್ಪಾದಿಸಲಿದೆ.

ಈ ಎಸ್‌ಯುವಿಯ ಪ್ರಮುಖ ವಿಶೇಷತೆ ಎಂದರೆ, ಸಂಪೂರ್ಣ ಎಲೆಕ್ಟ್ರಿಕ್ ಮೋಡ್‌ನಲ್ಲಿ 125 ಕಿಲೋಮೀಟರ್ವರೆಗೆ ಸಂಚರಿಸುವ ಸಾಮರ್ಥ್ಯ. ಹೈಬ್ರಿಡ್ ಮೋಡ್‌ನಲ್ಲಿ ಒಟ್ಟು 1,000 ಕಿಲೋಮೀಟರ್‌ಗಿಂತ ಹೆಚ್ಚು ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದರ ನಿರೀಕ್ಷಿತ ಬೆಲೆ ₹35 ಲಕ್ಷದಿಂದ ₹40 ಲಕ್ಷದವರೆಗೆ ಇರಬಹುದು. ಮಹೀಂದ್ರಾ XUV 7XO ಹಾಗೂ ಟಾಟಾ ಸಫಾರಿಗೆ ಇದು ಪೈಪೋಟಿ ನೀಡುವ ಸಾಧ್ಯತೆ ಇದೆ.

ಪರಿಸರ ಸ್ನೇಹಿ, ಉತ್ತಮ ಮೈಲೇಜ್ ಮತ್ತು ಹೊಸ ತಂತ್ರಜ್ಞಾನ ಹೊಂದಿರುವ ಎಸ್‌ಯುವಿ ಖರೀದಿಸಲು ಯೋಜಿಸುತ್ತಿರುವವರಿಗೆ ಜುಲೈ ತಿಂಗಳು ಮಹತ್ವದ ಅವಕಾಶವಾಗಲಿದೆ. ಎರಡೂ ಕಂಪನಿಗಳ ಹೊಸ ಮಾದರಿಗಳು ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಗ್ರಾಹಕರಿಗೆ ಮತ್ತಷ್ಟು ಆಯ್ಕೆಯನ್ನು ನೀಡಲಿವೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »