ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಇನ್ಮುಂದೆ ನಗದುಮುಕ್ತ..! ಏಪ್ರಿಲ್ 10ರಿಂದ ಯುಪಿಐ ಪಾವತಿಗೆ ಮಾತ್ರ ಅವಕಾಶ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪಾರದರ್ಶಕ ಆಡಳಿತ ವ್ಯವಸ್ಥೆಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಹೆದ್ದಾರಿಗಳಲ್ಲಿ (Toll Payment) ನಗದುಮುಕ್ತ ವ್ಯವಹಾರ ನಡೆಯಲಿದೆ ಎಂದು ಘೋಷಣೆ ಮಾಡಿದೆ. ಈ ಮಹತ್ವದ ಕ್ರಮವು ಏಪ್ರಿಲ್ 10ರಿಂದಲೇ ಜಾರಿಗೆ ಬರುತ್ತಿದ್ದು, ಏಪ್ರಿಲ್ 10ರ ಬಳಿಕ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಹಣ ಸ್ವೀಕರಿಸುವ ಕ್ರಮ ಇರುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಈಗಾಗಲೇ ಫಾಸ್ಟ್ಟ್ಯಾಗ್ ವ್ಯವಸ್ಥೆಯ ಮೂಲಕ ಭಾಗಶಃ ನಗದುಮುಕ್ತ ವ್ಯವಹಾರಗಳನ್ನೇ ಟೋಲ್ ಪ್ಲಾಜಾಗಳಲ್ಲಿ ನಡೆಸಲಾಗುತ್ತಿತ್ತು. ಆದರೆ ಫಾಸ್ಟ್ಟ್ಯಾಗ್ ಇಲ್ಲದವರಿಗೆ ಹೆದ್ದಾರಿ ಟೋಲ್ಪ್ಲಾಜಾಗಳಲ್ಲಿ ಹಣ ಪಾವತಿಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ಮೇಲೆ ಫಾಸ್ಟ್ಟ್ಯಾಗ್ ಇಲ್ಲದವರಿಗೆ ಟೋಲ್ ಪ್ಲಾಜಾಗಳಲ್ಲಿ ಕೇವಲ ಯುಪಿಐ ಮೂಲಕ ಮಾತ್ರ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಸಾಮಾನ್ಯ ದರಕ್ಕಿಂದ 25 ಪರ್ಸೆಂಟ್ ಹೆಚ್ಚಿನ ದಂಡ ಪಾವತಿಸಿ ಹೆದ್ದಾರಿಗಳಲ್ಲಿ ಪ್ರವೇಶ ಮಾಡಬಹುದಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಲಭ್ಯವಿರುವ 5 ವಿಶ್ವಾಸರ್ಹ ಎಲೆಕ್ಟ್ರಿಕ್ ಸ್ಕೂಟರ್ಗಳು: ಟಿವಿಎಸ್ ಐಕ್ಯೂಬ್ ನಿಂದ ಸುಜುಕಿ ಇ–ಆಕ್ಸೆಸ್ ವರೆಗೆ
ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಪಾವತಿ ಎರಡನ್ನೂ ಮಾಡಲು ನಿರಾಕರಿಸುವ ವಾಹನಗಳನ್ನು ನಿರ್ಬಂಧಿಸಲು ಟೋಲ್ಗಳಲ್ಲಿ ಅವಕಾಶ ನೀಡಲಾಗಿದೆ. ಈ ಮೊದಲು ಸರ್ಕಾರದ ಯಾವುದೆ ಗುರುತಿನ ಚೀಟಿಗಳನ್ನು ತೋರಿಸಿ ಖಾಸಗಿ ವಾಹನಗಳಲ್ಲಿ ಟೋಲ್ ವಿನಾಯಿತಿ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಎಕ್ಸೆಂಪ್ಟೆಡ್ ಫಾಸ್ಟ್ಟ್ಯಾಗ್ ಹೊಂದಿರುವ ವಾಹನಗಳಿಗೆ ಮಾತ್ರ ಇನ್ಮುಂದೆ ಟೋಲ್ ವಿನಾಯಿತಿ ಸಿಗಲಿದೆ. ಇದನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ಗುರುತಿನ ಚೀಟಿಗಳು ಟೋಲ್ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.



