ರಾಜ್ಯದ ನ್ಯಾಯಬೆಲೆ ಅಂಗಡಿಗಳ ಸಮಯ ಬದಲಾವಣೆ ಮಾಡಿದ ರಾಜ್ಯ ಸರ್ಕಾರ

ರಾಜ್ಯದ ಪಡಿತರದಾರರ ಹಿತದೃಷ್ಟಿಯಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.

ರಾಜ್ಯದ ಪಡಿತರದಾರರ ಹಿತದೃಷ್ಟಿಯಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಗಳ ದೈನಂದಿನ ಕಾರ್ಯನಿರ್ವಹಣೆಯ ಸಮಯವನ್ನು ಬದಲಾಯಿಸಿ ಆಹಾರ ಇಲಾಖೆ ಹೊಸ ಆದೇಶ ಹೊರಡಿಸಿದೆ. ಇನ್ಮುಂದೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಲಭವಾಗಿ ಪಡಿತರ ಸಿಗಲಿದೆ.

ಈ ಹಿಂದೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ಮಾತ್ರ ತೆರೆದಿರುತ್ತಿದ್ದವು. ಆದರೆ, ಇಲಾಖೆಯ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳು ಪ್ರತಿ ದಿನ ಬೆಳಿಗ್ಗೆ 6:00 ಗಂಟೆಯಿಂದ ಸತತವಾಗಿ ರಾತ್ರಿ 10:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ಕಾರ್ಮಿಕರು ಮತ್ತು ಉದ್ಯೋಗಿಗಳಿಗೆ ತಮಗೆ ಅನುಕೂಲಕರವಾದ ಸಮಯದಲ್ಲಿ ಪಡಿತರವನ್ನು ಪಡೆದುಕೊಳ್ಳಲು ದೊಡ್ಡ ಅವಕಾಶ ಸಿಕ್ಕಂತಾಗಿದೆ.

ಪ್ರಸಕ್ತ ಜುಲೈ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಾಗೂ ಇತರೆ ಆಹಾರ ಧಾನ್ಯಗಳ ವಿತರಣೆಯು ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ವಿಳಂಬವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಗಟು ಮಳಿಗೆಗಳಿಂದ ಧಾನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಎತ್ತುವಳಿ ಮಾಡಿಕೊಂಡಿದ್ದರೂ ಪಡಿತರ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಾಸ್ತಾನು ಲಭ್ಯವಾದ ತಕ್ಷಣವೇ ಕಡ್ಡಾಯವಾಗಿ ವಿತರಣೆ ಪ್ರಾರಂಭಿಸುವಂತೆ ಮತ್ತು ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಮುಗಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಮಗೆ ಇಷ್ಟಬಂದ ಸಮಯದಲ್ಲಿ ಅಂಗಡಿ ತೆರೆಯುತ್ತಿದ್ದರು. ಅಲ್ಲದೆ, ಪಡಿತರ ಖಾಲಿಯಾಗಿದೆ ಎಂದು ಹೇಳಿ ಗ್ರಾಹಕರನ್ನು ವಾಪಸ್ ಕಳುಹಿಸುವ ಮೂಲಕ ಕಳ್ಳಾಟ ಆಡುತ್ತಿದ್ದಾರೆಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಇದಕ್ಕೆ ತಕ್ಷಣವೇ ಬ್ರೇಕ್ ಹಾಕಲು ಸರ್ಕಾರ ದಿನದ 16 ಗಂಟೆಗಳ ಕಾಲ ಅಂಗಡಿಗಳನ್ನು ಮುಕ್ತವಾಗಿಡುವ ಈ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತಂದಿದೆ. ಸರ್ಕಾರದ ಈ ನೂತನ ಕ್ರಮದಿಂದಾಗಿ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಲಿದ್ದು, ಬಡ ಜನರಿಗೆ ಸಕಾಲದಲ್ಲಿ ಆಹಾರ ಧಾನ್ಯ ತಲುಪಲು ನೆರವಾಗಲಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »