ಟೀಂ ಕುಂದಾಪುರಿಯನ್ಸ್ ಪತ್ರ ಚಳುವಳಿಗೆ ಸರಕಾರದ ಸ್ಪಂದನೆ, 4 ತಿಂಗಳೊಳಗೆ ಕುಂದಾಪುರ ಪ್ಲೈಓವರ್ ಪೂರ್ಣ

0

ಬೆಂಗಳೂರು : ಕುಂದಾಪುರದಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ಲೈಓವರ್ ನಿರ್ಮಾಣ ಕಾಮಗಾರಿ ಆರಂಭಗೊಂಡು ದಶಕವೇ ಕಳೆದಿದೆ. ಪ್ಲೈಓವರ್ ಕಾಮಗಾರಿಯಿಂದಾಗಿ ಜನ ಅನುಭವಿಸುತ್ತಿರೋ ಸಮಸ್ಯೆ ಒಂದಲ್ಲ, ಎರಡಲ್ಲ. ಸಮಸ್ಯೆಯ ವಿರುದ್ದ ಜನ ನೂರಾರು ಬಾರಿ ಪ್ರತಿಭಟನೆ ನಡೆಸಿದ್ರೂ ಪ್ರಯೋಜನವಾಗ್ತಿಲ್ಲ. ಆದ್ರೀಗ ಟೀಂ ಕುಂದಾಪುರಿಯನ್ಸ್ ಕೈಗೊಂಡ ಪತ್ರ ಚಳುವಳಿ ಸರಕಾರಕ್ಕೆ ಬಿಸಿಮುಟ್ಟಿಸಿದೆ.

ಪತ್ರಚಳುವಳಿ ನಡೆಸುತ್ತಿರೋ ಟೀಂ ಕುಂದಾಪುರಿಯನ್ಸ್ ಸದಸ್ಯರು

ಕೇರಳ, ಕರ್ನಾಟಕ, ಗೋವಾಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ನಿರ್ಮಾಣಗೊಳ್ಳುತ್ತಿರೋ ಪ್ಲೈಓವರ್ ಕಾಮಗಾರಿಯ ವಿರುದ್ದ ಟೀಂ ಕುಂದಾಪುರಿಯನ್ಸ್ ಕೆರಳಿದ್ದಾರೆ. ಡಿಸೆಂಬರ್ 22 ರಂದು ಪತ್ರ ಚಳುವಳಿಗೆ ಕರೆ ನೀಡಿದ್ದ ಸಂಘಟನೆಯ ಕಾರ್ಯಕರ್ತರು ಸ್ಥಳೀಯ ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನವಯುಗ ಕಂಪೆನಿಯ ಅಧಿಕಾರಿಗಳು, ಮುಖ್ಯಸ್ಥರು ಸೇರಿದಂತೆ ಸುಮಾರು 50 ಮಂದಿ ಪತ್ರವನ್ನು ಬರೆದು ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಆಗ್ರಹಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಟೀಂ ಕುಂದಾಪುರಿಯನ್ಸ್

ಟೀಂ ಕುಂದಾಪುರಿಯನ್ಸ್ ಆಗ್ರಹಕ್ಕೆ ಮಣಿದಿರೋ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಇದೀಗ ಮರುಪತ್ರ ಬಂದಿದ್ದು, ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ.

ಸರಕಾರದಿಂದ ಬಂದಿರುವ ಸ್ಪಂದನೆಯ ಪತ್ರ

ಅಲ್ಲದೇ ಹಾಗೆ ಮಾನ್ಯ ಮುಜರಾಯಿ ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿರೋ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಬಂಧಿಸಿದ ಇಲಾಖೆಗೆ ನಿಯಮಾನುಸಾರ ಕ್ರಮಕೈಕೊಳ್ಳುವ ಭರವಸೆ ನೀಡಿದ್ದಾರೆ ಎನ್ನುವುದನ್ನು ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಮೇ ಅಂತ್ಯದ ಒಳಗಾಗಿ ಸಂಪೂರ್ಣವಾಗಿ ಕಾಮಗಾರಿಯನ್ನು ಪೂರ್ಣಗೊಳಿಸೋ ಭರವಸೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರೋ ಕುಂದಾಪುರದ ಯುವಕ, ಯುವತಿಯರು ಸೇರಿಕೊಂಡು ಸ್ಥಾಪಿಸಿರೋ ಟೀಂ ಕುಂದಾಪುರಿಯನ್ಸ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನಮೆಚ್ಚುಗೆ ಪಡೆದಿದೆ. ಇದೀಗ ದಶಕಗಳಿಂದಲೂ ತಮ್ಮೂರಿನ ಜನತೆ ಅನುಭವಿಸುತ್ತಿರೋ ಸಮಸ್ಯೆಗೆ ಪರಿಹಾರ ಕೊಡಿಸೋ ನಿಟ್ಟಿನಲ್ಲಿ ಟೀಂ ಕುಂದಾಪುರಿಯನ್ಸ್ ಕೈಗೊಂಡ ಪತ್ರ ಚಳುವಳಿ ಇದೀಗ ಫಲಕೊಟ್ಟಿದೆ. ಇನ್ನಾದ್ರೂ ಅಧಿಕಾರಿಗಳು ಮೈಚಳಿಬಿಟ್ಟು ಕುಂದಾಪುರದ ಪ್ಲೈ ಓವರ್ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸೋ ಅಗತ್ಯವಿದೆ. ಒಂದೊಮ್ಮೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯೋದಾಗಿ ಟೀಂ ಕುಂದಾಪುರಿಯನ್ಸ್ ಎಚ್ಚರಿಸಿದ್ದಾರೆ.

Leave A Reply

Your email address will not be published.