ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್

0

ಬೆಂಗಳೂರು : ಬಾರೀ ಪೈಪೋಟಿಯ ನಡುವಲ್ಲಿಯೇ ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಡಿಜಿ – ಐಜಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಿರ್ಗಮಿತ ಡಿಜಿ – ಐಜಿ ನೀಲಮಣಿ ಎನ್.ರಾಜು ಅಧಿಕಾರ ಹಸ್ತಾಂತರಿಸಿದ್ದಾರೆ. ನೇಮಕ ಆದೇಶ ಹೊರಬೀಳುತ್ತಿದ್ದಂತೆಯೇ ಪ್ರವೀಣ್ ಸೂದ್ ಅವರು ಡಿಜಿ – ಐಜಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಡಿಜಿ – ಐಜಿಯಾಗಿದ್ದ ನೀಲಮಣಿ ಎನ್.ರಾಜು ಅವರು ಇಂದು ನಿವೃತ್ತಿಯಾಗಿದ್ದರು. ಹೀಗಾಗಿ ಅವರಿಗೆ ಬೀಳ್ಕೊಡುಗೆ ನೀಡಲಾಗಿತ್ತು. ಡಿಜಿ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾಗಿದ್ದ ಎ.ಎಂ.ಪ್ರಸಾದ್ ಹಾಗೂ ಪ್ರವೀಣ್ ಸೂದ್ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಹಿರಿತನದ ಆಧಾರದಲ್ಲಿ ಎ.ಎಂ.ಪ್ರಸಾದ್ ಅವರೇ ಡಿಜಿ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ರಾಜ್ಯ ಸರ್ಕಾರ ಪ್ರವೀಣ್ ಸೂದ್ ಅವರಿಗೆ ಮಣೆ ಹಾಕಿದೆ.


ಪ್ರವೀಣ್ ಸೂದ್ 1986ನೇ ಬ್ಯಾಚ್‌ನ ಅಧಿಕಾರಿಯಾಗಿದ್ದು, ಇನ್ನೂ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಹಿಮಾಚಲ ಪ್ರದೇಶ ಮೂಲದವರಾದ ಪ್ರವೀಣ್ ಸೂದ್ ಬಿ.ಟೆಕ್ ಹಾಗೂ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1989 ಮೈಸೂರು ಎಎಸ್‌ಪಿಯಾಗಿ ವೃತ್ತಿ ಆರಂಭಿಸಿದ್ದ ಪ್ರವೀಣ್ ಸೂದ್ ಅವರು ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಾತ್ರವಲ್ಲ 1999 ನಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. 2004-07 ರಲ್ಲಿ ಮೈಸೂರು ಆಯುಕ್ತರಾಗಿ, 2008ರಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. 1996 ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2011 ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. 2013-14 ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ, 2017 ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Leave A Reply

Your email address will not be published.