ಭಾರತವೂ ಸೇರಿದಂತೆ ವಿಶ್ವದ ಎಲ್ಲೆಡೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಭಾರತದಲ್ಲಿ ಆಕ್ಸಿಜನ್ ಬೆಡ್, ಮೆಡಿಸಿನ್, ಇಂಜಕ್ಷನ್ ಸೇರಿದಂತೆ ಹಲವು ಸೌಲಭ್ಯದ ಕೊರತೆ ಎದುರಾಗಿದೆ. ಆದರೆ ಇದೆಲ್ಲವನ್ನು ಮೀರಿಸುವಂತಹ ಸಮಸ್ಯೆಗಳು ಮುಂದಿನ ದಿನದಲ್ಲಿ ಕಾದಿದೆ. ಮೂರನೇ ಅಲೆ ಎದುರಿಸುವ ಮುನ್ನ ಸಂಬಂಧ ಪಟ್ಟವರು ಇತ್ತ ಗಮನ ಹರಿಸಬೇಕು ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಎಚ್ಚರಿಸಿದ್ದಾರೆ.

ಕೊರೋನಾ ಎರಡನೇ ಅಲೆಯಲ್ಲಿ ನಾವು ಆಕ್ಸಿಜನ್ ಬೆಡ್, ಐಸಿಯು ಹಾಗೂ ಮೆಡಿಸಿನ್ ಕೊರತೆ ಎದುರಿಸುತ್ತಿದ್ದೇವೆ. ಆದರೆ ಮೂರನೇ ಅಲೆ ಇನ್ನೇನು ಸನ್ನಿಹಿತದಲ್ಲಿದೆ. ದೇಶದಲ್ಲಿ ಅಂದಾಜು 75 ಸಾವಿರ ಆಕ್ಸಿಜನ್ ಸಹಿತ ಬೆಡ್ ಗಳ ವ್ಯವಸ್ಥೆ ಇರಬಹುದು. ಆದರೆ ಇದು ಸಾಕಾಗುವುದಿಲ್ಲ. ಕೊರೋನಾಕ್ಕೆ ತುತ್ತಾಗುವವರ ಪೈಕಿ ಶೇಕಡಾ 5 ರಷ್ಟು ಜನರಿಗೆ ಐಸಿಯುದಲ್ಲಿ ಚಿಕಿತ್ಸೆ ಅಗತ್ಯವಾಗುತ್ತದೆ. ಹೀಗಾಗಿ ತಕ್ಷಣವೇ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕು.

ಕನಿಷ್ಟ ಎಂದರೇ 5.5 ಲಕ್ಷ ಬೆಡ್ ಗಳನ್ನಾದರೂ ಸಿದ್ಧಪಡಿಸಬೇಕು ಎಂದು ದೇವಿ ಶೆಟ್ಟಿ ಅಭಿಪ್ರಾಯಿಸಿದ್ದಾರೆ. ದೇಶದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಸಿಬ್ಬಂದಿಗಳ ಕೊರತೆ ಎದುರಿಸುತ್ತಿವೆ. ನರ್ಸ್ ಹಾಗೂ ವೈದ್ಯರ ಸಂಖ್ಯೆ ಕುಸಿಯುತ್ತಿದೆ. ಶೇಕಡಾ 75 ರಷ್ಟು ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ಕೇಂದ್ರ ಸರ್ಕಾರ ತಕ್ಷಣ ಸರ್ಕಾರಿ ಆಸ್ಪತ್ರೆಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದರು.

ನಗರದಲ್ಲಿ ಸಿಂಬಯೋಸಿಸ್ ಗೋಲ್ಡನ್ ಜ್ಯುಬಿಲಿ ಸಮಾರಂಭದಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಡಾ.ದೇವಿ ಶೆಟ್ಟಿ, ಈಗ ಕ್ಸಿಜನ್ ಕೊರತೆ, ಮೆಡಿಸಿನ್ ಕೊರತೆಯಂತಹ ಹೆಡ್ಡಿಂಗ್ ನೋಡುತ್ತಿದ್ದೇವೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೇ ಮುಂದಿನ ದಿನದಲ್ಲಿ ಐಸಿಯುನಲ್ಲಿ ವೈದ್ಯರು ಹಾಗೂ ನರ್ಸ್ ಗಳ ಕೊರತೆಯಿಂದ ರೋಗಿ ಸಾವು ಎಂಬ ತಲೆಬರಹ ನೋಡಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

ತಕ್ಷಣವೇ 2 ಲಕ್ಷ ನರ್ಸ್ ಗಳು ಹಾಗೂ 1.5 ಲಕ್ಷ ವೈದ್ಯರ ನೇಮಕ ಆಗಬೇಕಾಗಿದೆ. ಒಬ್ಬ ರೋಗಿ ಐಸಿಯುನಲ್ಲಿ ಕನಿಷ್ಟ 10 ದಿನ ಇರಬೇಕಾಗುತ್ತದೆ. ಹೀಗೆ ಐಸಿಯುನಲ್ಲಿರೋ ರೋಗಿಗಳನ್ನು ನೋಡಿಕೊಳ್ಳೋದು ನರ್ಸ್ ಗಳೇ ವಿನಃ ವೈದ್ಯರಲ್ಲ. ಹೀಗಾಗಿ ದಯವಿಟ್ಟು ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಿ, ಕೊರೋನಾ ಮೂರನೇ ಅಲೆಗೂ ಮುನ್ನ ಎಚ್ಚರಿಕೆ ವಹಿಸಿ ಮಎಂದು ಮನವಿ ಮಾಡಿದ್ದಾರೆ.

ಮೆಟ್ರೋ ಸಿಟಿಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿರಬಹುದು. ಆದರೆ ಎಲ್ಲೆಡೆಯೂ ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದೆ. ಮೊದಲ ಬಾರಿಗೆ ಕೊರೋನಾ ಬಂದಾಗ ರೋಗಿಗಳ ನಿರ್ವಹಣೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಇದ್ದ ಉತ್ಸಾಹ ಶಕ್ತಿ ಈಗ ಉಳಿದಿಲ್ಲ. ವೈದ್ಯಕೀಯ ಸಿಬ್ಬಂದಿ ಸೋತು ಹೋಗಿದ್ದಾರೆ.ಹೀಗಾಗಿ ತಕ್ಷಣ ಸಂಬಂಧಿಸಿದವರು ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡದೇ ಇದ್ದಲ್ಲಿ ಬಹುದೊಡ್ಡ ದುರಂತಕ್ಕೆ ಎಡೆ ಮಾಡಿಕೊಟ್ಟಂತಾಗಲಿದೆ ಎಂದು ಡಾ.ದೇವಿ ಶೆಟ್ಟಿ ಸಲಹೆ ನೀಡಿದ್ದಾರೆ.
