ಕೈ ಮುಗಿಯೋ ನೆಪದಲ್ಲಿ ದೇವಾಲಯಕ್ಕೆ ಕಾಲಿಟ್ಟವನು…, ದೇವರನ್ನೆ ಕದ್ದು ಮಾರಾಟಕ್ಕಿಟ್ಟ…!!

ಬೆಂಗಳೂರು: ದೇವಸ್ಥಾನ ಕ್ಕೆ ಹೋಗಿ ಮಾಡಿರೋ ಪಾಪ ಪರಿಹರಿಸು ಅಂತ ಬೇಡಿಕೊಳ್ಳೋರನ್ನು ನೋಡಿರ್ತಿರಾ. ಆದರೇ ಈತ ಮಾತ್ರ ಜನರ ಕಷ್ಟ ಪರಿಹರಿಸೋ ದೇವರಿಗೆ ಕಷ್ಟ ತಂದಿಟ್ಟಿದ್ದ.

ದೇವರಿಗೆ ಕೈಮುಗಿದು ಕಾಪಾಡಪ್ಪ ಅಂತ ಕೇಳೋ ಬದಲು ದೇವರ ವಿಗ್ರಹಕ್ಕೆ ಸ್ಕೆಚ್ ಹಾಕಿ ಕದ್ದೊಯ್ದು ಮಾರಾಟಕ್ಕಿಟ್ಟಿದ್ದ ಈ ಆಸಾಮಿ. ಬೆಂಗಳೂರಿನ ಹೊರವಲಯದ ಚಿಕ್ಕಜಾಲದ ಹುಣಸಮಾರನಹಳ್ಳಿ ಗ್ರಾಮದಲ್ಲಿರೋ ಮಠದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಠದಲ್ಲಿ ೧೫೦ ವರ್ಷ ಪುರಾತನವಾದ ಪಂಚಲೋಹದ ವಿಗ್ರಹವಿದೆ. ನಾಲ್ಕು ಅಡಿ ಎತ್ತರದ ಚಂದ್ರಮೌಳೇಶ್ವರನ ವಿಗ್ರಹಕ್ಕೆ ಸ್ಕೆಚ್ ಹಾಕಿದ್ದ ಆರೋಪಿ ರಘು ಎಂಬಾತ ಹೆಲ್ಮೆಟ್ ಧರಿಸಿ ದೇವಾಲಯ ಕ್ಕೆ ಹೋಗಿದ್ದಾನೆ.

ದೇವರಿಗೆ ಕೈ ಮುಗಿಯೋ ನೆಪದಲ್ಲಿ ನವೆಂಬರ್ ೧೫ ರಂದು ಹೆಲ್ಮೆಟ್ ಸಮೇತ ಹೋದ ರಘು ಕೈಮುಗಿದು ವಾಪಸ ಬರುವಾಗ ದೇವರನ್ನೆ ಎತ್ತಿಕೊಂಡು ಬಂದು ಬೈಕ್ ನಲ್ಲಿ ಪರಾರಿಯಾಗಿದ್ದಾನೆ.ಪೂಜೆ ವೇಳೆ ದೇವರನ್ನೆ ಕಾಣದೇ ಕಂಗಾಲಾದ ಮಠದ ಗುರುನಂಜೇಶ್ವರ್ ಶಿವಾಚಾರ್ಯ ಸ್ವಾಮೀಜಿ ಪೊಲೀಸರಿಗೆ ದೂರು ನೀಡಿದ್ದರು.

ಮಠದ ಸಿಸಿ ಟಿವಿಯಲ್ಲಿ ಆರೋಪಿ ರಘು ಮೂರ್ತಿ ಕದ್ದು ಹೋಗುವ ದೃಶ್ಯ ದಾಖಲಾಗಿತ್ತು. ಇದನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪುರಾತನ ದೇವರ ಮೂರ್ತಿಯನ್ನು ಕದ್ದಿದ್ದ ರಘು ಅದನ್ನು ರೈಸ್ ಪುಲ್ಲಿಂಗ್ ದಂಧೆ ಮಾಡುವ ವರಿಗೆ ಮಾರಲು ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

ಪುರಾತನ ವಿಗ್ರಹಗಳಿಗೆ ರೈಸ್ ಪುಲ್ಲಿಂಗ್ ದಂಧೆ ಮಾಡುವವರು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಾರೆ. ಇದೇ ಕಾರಣಕ್ಕೆ ಧೀಡಿರ್ ಶ್ರೀಮಂತನಾಗಲು ಆರೋಪಿ ರಘು ದೇವರನ್ನೆ ಕದ್ದು ಮಾರಲು ನಿರ್ಧರಿಸಿದ್ದ ಎನ್ನಲಾಗಿದೆ.
ಸಧ್ಯ ರಘುನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಗ್ರಹವನ್ನು ವಶಪಡಿಸಿಕೊಂಡು ಮಠಕ್ಕೆ ಹಸ್ತಾಂತರಿಸಿದ್ದಾರೆ‌.

Comments are closed.