ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ : ಕಾಂಗ್ರೆಸ್ – ಬಿಜೆಪಿ ಸದಸ್ಯರಿಂದ ಹೈಡ್ರಾಮಾ : ಉಪಸಭಾಪತಿ ಧರ್ಮೇಗೌಡರ ರಕ್ಷಣೆ

ಬೆಂಗಳೂರು : ವಿಧಾನಪರಿಷತ್ ಕಲಾಪದಲ್ಲಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನೇ ಎಳೆದಾಡಿರುವ ಘಟನೆ ನಡೆದಿದೆ.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪದಚ್ಯುತಿಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿರುವ ಬೆನ್ನಲ್ಲೇ ವಿಧಾನ ಪರಿಷತ್ ಇಂದು ಗದ್ದಲದ ಗೂಡಾಗಿತ್ತು. ಪರಿಷತ್ ಕಲಾಪ ಆರಂಭದ ಕುರಿತು ಬೆಲ್ ಆಗುತ್ತಿದ್ದಂತೆಯೇ ಉಪಸಭಾಪತಿ ಧರ್ಮೇಗೌಡ ಅವರು ಸಭಾಪತಿ ಪೀಠದಲ್ಲಿ ಬಂದು ಕುಳಿತಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆಯಲ್ಲಿ ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಎಳೆದಾಡಿಕೊಂಡಿದ್ದಾರೆ. ಉಪಸಭಾಪತಿ ಧರ್ಮೇಗೌಡರನ್ನು ಕೂಡ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದಾರೆ. ನಂತರ ಸಭಾಂಗಣದ ಬಾಗಿಲನ್ನು ಬಿಜೆಪಿ ಸದಸ್ಯರು ಮುಚ್ಚಿದ್ದು, ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಸಭಾಂಗಣದ ಬಾಗಿಲನ್ನು ಕಾಲಿನಿಂದ ಒದ್ದಿದ್ದಾರೆ. ಅಲ್ಲದೇ ಕಾಂಗ್ರೆಸ್ ಸದಸ್ಯರು ಸಭಾಪತಿ ಮುಂದಿನ ಗಾಜನ್ನು ಕಿತ್ತು ಹಾಕಿದ್ದಾರೆ.

ಇನ್ನು ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ ಅವರು ಉಪಸಭಾಪತಿ ಧರ್ಮೇಗೌಡ ಅವರನ್ನು ಎಳೆದಾಡಿದ್ದು, ಬಿಜೆಪಿ ಸದಸ್ಯರು ಉಪಸಭಾಪತಿಗಳನ್ನು ರಕ್ಷಣೆ ಮಾಡಿದ್ದಾರೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪಕ್ಕೆ ಆಗಮಿಸಿ, ಅಧಿವೇಶವನ್ನು ಅನಿರ್ಧೀಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ.

Comments are closed.