ಚಿತ್ರಮಂದಿರದ ಮೇಲೆ ನಿರ್ಬಂಧ…! ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಸರ್ಕಾರದ ವಿರುದ್ಧ ಟ್ವೀಟ್ ವಾರ್…!!


ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಚಿತ್ರಮಂದಿರಗಳ ನಿರ್ಬಂಧ ಹೇರಿದ್ದು, ಸರ್ಕಾರದ ಆದೇಶಕ್ಕೆ ಸ್ಯಾಂಡಲ್ ವುಡ್ ತಿರುಗಿಬಿದ್ದಿದೆ. ಸುದೀಪ್,ಶಿವಣ್ಣ,ಯಶ್ ಸೇರಿದಂತೆ ಹಲವು ನಟರು ಸರ್ಕಾರದ ವಿರುದ್ಧ ಟ್ವೀಟ್ ವಾರ್ ನಡೆಸಿದ್ದಾರೆ.

ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್ ಬಹುನೀರಿಕ್ಷಿತ ಚಿತ್ರ  ಯುವರತ್ನ ತೆರೆಕಂಡಿದೆ. ಚಿತ್ರತೆರೆಕಂಡ ಒಂದೇ ದಿನಕ್ಕೆ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಹೀಗಾಗಿ ಎರಡನೇ ಅಲೆಯ ನಿಯಂತ್ರಣ ನಿಯಮಗಳ ಅನುಸಾರ ಚಿತ್ರಮಂದಿರಗಳಿಗೆ ಶೇಕಡಾ 50 ರಷ್ಟು ಆಸನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸೂಚಿಸಿದೆ.

ಸರ್ಕಾರದ  ಈ ನಿರ್ಣಯದಿಂದ ಚಿತ್ರೋದ್ಯಮಕ್ಕೆ ತೊಂದರೆಯಾಗಲಿದೆ ಎಂಬ ಕೂಗು ಕೇಳಿಬಂದಿದ್ದು, ಪುನೀತ್ ರಾಜಕುಮಾರ್, ಡಾಲಿಧನಂಜಯ್, ಯುವರತ್ನ ನಿರ್ದೇಶನ್ ಸಂತೋಷ ಆನಂದರಾಮ್ , ಸುದೀಪ್,ಶಿವಣ್ಣ,ಯಶ್,ಉಪೇಂದ್ರ ಸೇರಿದಂತೆ ಎಲ್ಲ ಸ್ಟಾರ್ ನಟ-ನಿರ್ದೇಶಕರು ಚಿತ್ರಮಂದಿರದ ಮಾಲೀಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಸರ್ಕಾರದ ನಿರ್ಧಾರವನ್ನು ಶಾಕಿಂಗ್  ಎಂದಿರುವ ಸುದೀಪ್,  ಸರ್ಕಾರದ  ಈ ನಿರ್ಧಾರ ಈಗಷ್ಟೇ ಬಿಡುಗಡೆಯಾಗಿರುವ ಸಿನಿಮಾಗಳ ಪಾಲಿಗೆ ಅತ್ಯಂತ ಶಾಕಿಂಗ್. ಆದರೆ ಸರ್ಕಾರದ ನಿಯಮವನ್ನು ಗೌರವಿಸುವುದು ನಮ್ಮ ಜವಾಬ್ದಾರಿ. ಇಂಥ ಹೊತ್ತಿನಲ್ಲೂ ಯುವರತ್ನ್ ಸಿನಿಮಾ ಎಲ್ಲ ಅಡೆತಡೆ ದಾಟಿ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ ಎಂದಿದ್ದಾರೆ.

https://twitter.com/NimmaShivanna/status/1378289418222534662?s=1002

ಇನ್ನು ಸರ್ಕಾರದ ನಿಯಮದ ಬಗ್ಗೆ  ಟ್ವೀಟ್ ಮಾಡಿರೋ ಶಿವಣ್ಣ, ಸಂಕಷ್ಟದಲ್ಲಿರುವ ಚಿತ್ರೋದ್ಯಮಕ್ಕೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಅನ್ನೋ ವಿಶ್ವಾಸನಮಗಿದೆ. ಚಿತ್ರಮಂದಿರಗಳಲ್ಲಿ ಎಲ್ಲ ನಿಯಮವನ್ನು ಪಾಲಿಸಲಾಗುತ್ತದೆ. ಹೀಗಾಗಿ ನಾನು ಸಿಎಂ ಬಿಎಸ್ವೈಯವರಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಡಲು ಮನವಿ ಮಾಡುತ್ತೇನೆ ಎಂದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೂಡ ಸರ್ಕಾರದ ನಿರ್ಣಯವನ್ನು ಖಂಡಿಸಿದ್ದು, ನಮ್ಮಲ್ಲಿ ಜಾಗೃತಿಯು ಇದೆ. ಜವಾಬ್ದಾರಿಯೂ ಇದೆ. ಹಸಿವೆಗಿಂತ ದೊಡ್ಡ ಕಾಯಿಲೆ ಯಾವುದು ಇಲ್ಲ. ನಿರ್ಭಂದನೆಗಳು ಬದುಕಿಗೆ ಮಾರಕವಾಗಬಾರದು. ಚಲನಚಿತ್ರರಂಗದ ಮೇಲಿನ ಹಠಾತ್ ನಿರ್ಬಂಧ ಖಂಡನೀಯ. ಎಲ್ಲರಿಗೂ ದುಡಿಯುವ ಹಕ್ಕಿದೆ. ಚಿತ್ರರಂಗಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ಮೇಲೆ ಚಿತ್ರಮಂದಿರದ ಮೇಲಿನ ನಿರ್ಬಂಧ ಸಡಿಲಿಸುವಂತೆ ಒತ್ತಡ ಹೇರುವ ಕೆಲಸವನ್ನು ಚಿತ್ರರಂಗ ಗಣ್ಯರು ಆರಂಭಿಸಿದ್ದು, ಸರ್ಕಾರ ಸಿನಿಮಾ ಮಂದಿಯ ಒತ್ತಡಕ್ಕೆ ಮಣಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

Comments are closed.