ಕೊರೊನಾ ವಿಚಾರದಲ್ಲಿ ರಾಜ್ಯ ಸರಕಾರದ ನಿರ್ಲಕ್ಷ್ಯ : ರಾಜ್ಯದಲ್ಲಿ 35,000 ಮಂದಿ ವಿದೇಶದಿಂದ ಬಂದವರು ನಾಪತ್ತೆ !

0

ಬೆಂಗಳೂರು : ಕೊರೊನಾ ಮಹಾಮಾರಿ ವಿಶ್ವದ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಬಹುತೇಕ ರಾಷ್ಟ್ರಗಳು ಕೊರೊನಾ ವಿಚಾರದಲ್ಲಿ ಎಚ್ಚೆತ್ತುಕೊಂಡಿವೆ. ಆದರೆ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯವಹಿಸುತ್ತಿದೆ. ಇದೀಗ ವಿದೇಶದಿಂದ ರಾಜ್ಯಕ್ಕೆ ಮರಳಿರುವ ಬರೋಬ್ಬರಿ 35,000 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಕೊರೊನಾ ವಿರುದ್ದ ಬಹುತೇಕ ರಾಷ್ಟ್ರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ. ಚೀನಾದಲ್ಲಿ ಮರಣ ಮೃದಂಗವೇ ನಡೆಯುತ್ತಿದ್ರೆ, ಇಟಲಿ ಸರಕಾರ ಕೈಚೆಲ್ಲಿ ಕುಳಿತಿದೆ. ಆದರೆ ಆರಂಭಿಕ ಹಂತದಲ್ಲಿರೋ ಕರ್ನಾಟಕದಲ್ಲಿ ಸರಕಾರದ ನಿರ್ಲಕ್ಷ್ಯಕ್ಕೆ ಕೊರೊನಾ ಹರಡುವ ಭೀತಿ ಎದುರಾಗಿದೆ. ಮಾರ್ಚ್ 13ರ ನಂತರ ರಾಜ್ಯಕ್ಕೆ 35,000ಕ್ಕೂ ಅಧಿಕ ಮಂದಿ ವಿದೇಶದಿಂದ ವಾಪಾಸಾಗಿದ್ದಾರೆ. ಆದರೆ ರಾಜ್ಯ ಸರಕಾರ ವಿದೇಶದಿಂದ ಬಂದವರ ಕುರಿತು ದಿನಕ್ಕೊಂದು ಲೆಕ್ಕಕೊಡುತ್ತಿವೆ. ಸರಕಾರ, ಪೊಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ನಡೆದಿರೋ ಪತ್ರ ವ್ಯವಹಾರದಲ್ಲಿ ವಿದೇಶದಿಂದ ಬಂದವರ ಸಂಖ್ಯೆ ಬರೋಬ್ಬರಿ 35,000 ಅಂತ ಅಧಿಕೃತವಾಗಿ ಹೇಳಿಕೊಂಡಿದೆ. ಅಲ್ಲದೇ ವಿದೇಶದಿಂದ ಬಂದವರಲ್ಲಿ ಬಹುತೇಕರಿಗೆ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಒಂದೊಮ್ಮೆ ಸ್ವದೇಶಕ್ಕೆ ಮರಳಿದವರ ಪೈಕಿ ಶೇ.5ರಷ್ಟು ಕೊರೊನಾ ದೃಢಪಟ್ಟರೂ ಕೂಡ ರಾಜ್ಯದಕ್ಕೆ ಅಪಾಯ ಎದುರಾಗೋದು ಕಟ್ಟಿಟ್ಟ ಬುತ್ತಿ. ಇಂತಹ ಸ್ಪೋಟಕ ಮಾಹಿತಿಯನ್ನು ರಾಜ್ಯದ ಪ್ರಮುಖ ಸುದ್ದಿವಾಹಿನಿ ಬಯಲಿಗೆಳೆದಿದೆ.

ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಬಗ್ಗೆ ವರದಿ ನೀಡುತ್ತಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಆರಂಭಿಸಿದೆ. ಮಾರ್ಚ್ 13ರಿಂದ ಇದುವರೆಗೂ ಮಂಗಳೂರು ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬರೋಬ್ಬರಿ 229 ವಿಮಾನಗಳು ಆಗಮಿಸಿವೆ. ವಿಮಾನಗಳ ಸಾಮರ್ಥ್ಯವನ್ನು ನೋಡಿದ್ರೆ 89,000 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆದರೆ ಅರ್ಧದಷ್ಟು ಲೆಕ್ಕವಿಟ್ಟರೂ ರಾಜ್ಯಕ್ಕೆ ವಿದೇಶಗಳಿಂದ ಬಂದವರ ಸಂಖ್ಯೆ ಬರೋಬ್ಬರಿ 40,000 ದಾಟುತ್ತಿದೆ. ಇಷ್ಟೊಂದು ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆಸಿರುವವರು ರಾಜ್ಯಕ್ಕೆ ಆಗಮಿಸಿದ್ದರೂ ಕೂಡ ರಾಜ್ಯ ಸರಕಾರ ಅವರ ಲೆಕ್ಕವಿಟ್ಟಿಲ್ಲ. ಅವರ ಮೇಲೆ ನಿಗಾ ಇರಿಸಿಲ್ಲ. ಹೀಗೆ ಬಂದವರು ಕಡ್ಡಾಯವಾಗಿ ತಪಾಸಣೆಗೆ ಒಳಪಟ್ಟಿಲ್ಲ. ಸರಕಾರ ಸತ್ಯವನ್ನು ಮುಚ್ಚಿಟ್ಟಿರುವುದರಿಂದ ಜನರು ಆತಂಕಕ್ಕೆ ಸಿಲುಕುವಂತಾಗಿದೆ.

ವಿದೇಶಗಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ.. ಆದರೆ ವಿದೇಶಿ ಪ್ರಯಾಣಿಕರ ನಿರ್ಬಂಧವಾಗಲಿ, ವಿದೇಶಿ ಪ್ರಯಾಣಿಕರಿಗೆ ಕಡ್ಡಾಯ ತಪಾಸಣೆಯನ್ನಾಗಲಿ ಮಾಡಿಲ್ಲ. ಕೆಲವರು ನೇರವಾಗಿ ಮಂಗಳೂರು ಮತ್ತು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರೆ, ಇನ್ನು ಹಲವರು ಮುಂಬೈ, ಚೆನೈ ಹಾಗೂ ಗೋವಾ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಆಗಮಿಸಿ ನಂತರ ರೈಲು, ಬಸ್ಸುಗಳ ಮೂಲಕ ತಮ್ಮೂರಿಗೆ ತೆರಳಿದ್ದಾರೆ. ಇನ್ನು ಕೆಲವರು ಇತರ ರಾಜ್ಯಗಳ ವಿಮಾನ ನಿಲ್ದಾಣದಕ್ಕೆ ಆಗಮಿಸಿ ನಂತರ ಬೆಂಗಳೂರಿನ ಡೊಮೆಸ್ಟಿಕ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕೇವಲ ಅಂತರಾಷ್ಟ್ರೀಯ ವಿಮಾನದಿಂದ ಬಂದವರನ್ನು ಮಾತ್ರವೇ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ ಸ್ವದೇಶಿ ವಿಮಾನಗಳಲ್ಲಿ ಬಂದವರನ್ನು ಸ್ಕ್ರೀನಿಂಗ್ ಗೆ ಒಳಪಡಿಸಿಲ್ಲ. ಇನ್ನು ಸ್ಕ್ರೀನಿಂಗ್ ಗೆ ಒಳಪಟ್ಟವರ ವಿರುದ್ದವೂ ಆರಂಭದಲ್ಲಿ ಯಾವುದೇ ಕ್ರಮಗಳನ್ನು ಸರಕಾರ ಕೈಗೊಂಡಿರಲಿಲ್ಲ. ವಿದೇಶದಿಂದ ಮರಳಿದವರು ಕೂಡ ಜಾಗೃತೆವಹಿಸದೇ ಮಹಾಮಾರಿ ಕೊರೊನಾವನ್ನು ತಮ್ಮೂರಿಗೆ ಹರಡೋ ಕಾರ್ಯವನ್ನು ಮಾಡುತ್ತಿದ್ದಾರೆ.

ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೂ ಕೂಡ ಪ್ಲ್ಯಾಟ್ ಗಳಲ್ಲಿ ಕದ್ದುಮುಚ್ಚಿ ಕುಳಿತಿದ್ದಾರೆನ್ನುವ ಆರೋಪ ಕೇಳಿಬರುತ್ತಿದೆ. ಇದೀಗ ರಾಜ್ಯ ಸರಕಾರ ಗುಪ್ತವಾಗಿ ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆಗೆ ನಡೆಸಿರೋ ಪತ್ರವ್ಯವಹಾರದ ಬೆನ್ನಲ್ಲೇ ರಾಜ್ಯಕ್ಕೆ ಮರಳಿದವರ ಹುಡುಕಾಟವನ್ನು ಆರಂಭಿಸಿದೆ. ಈಗಾಗಲೇ ಸುಮಾರು 500 ತಂಡಗಳನ್ನು ರಚಿಸಿಕೊಂಡು ವಿದೇಶಗಳಿಂದ ಬಂದಿರುವವರ ಕೈಗೆ ಸೀಲ್ ಹಾಕಲು ಮುಂದಾಗಿದೆ. ಆದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನುವಂತಾಗಿ ಸರಕಾರದ ಸ್ಥಿತಿ. ಕರಾವಳಿ ಭಾಗದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ವಿದೇಶದಲ್ಲಿ ನೆಲೆಸಿರುವವರು ಆಗಮಿಸಿದ್ದಾರೆ. ಆದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ವಿದೇಶದಿಂದ ಬಂದವರ ಮೇಲೆ ನಿಗಾ ಇರಿಸಿಲ್ಲ.

ಕೈಯಲ್ಲಿ ಸೀಲ್ ಇದ್ದರೂ ಓಡಾಟ ರಾಜಾರೋಷ ?
ಹೀಗೆ ರಾಜ್ಯಕ್ಕೆ ಮರಳಿರುವವನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಏರ್ ಪೋರ್ಟ್ ಗಳಲ್ಲಿ ಕೈಗೆ ಸ್ಟ್ಯಾಂಪಿಂಗ್ ಹಾಕಲಾಗುತ್ತಿದೆ. ಆದರೆ ಅದಕ್ಕೂ ಮೊದಲು ರಾಜ್ಯಕ್ಕೆ ಮರಳಿದವರನ್ನು ಆರೋಗ್ಯ ಇಲಾಖೆ ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸಿಲ್ಲ. ಮಾತ್ರವಲ್ಲ ವಿದೇಶದಿಂದ ಬಂದ ಹಲವರಿಗೆ ಕೊರೊನಾ ಸೋಂಕು ಇದ್ದರೂ ಕೂಡ ಬಹುತೇಕರು ತಪಾಸಣೆಗೆ ಒಳಪಡಿಸಿಲ್ಲ. ಇನ್ನು ವಿದೇಶದಿಂದ ಬಹುತೇಕರಿಗೆ ಮನೆಯಲ್ಲಿಯೇ 14 ದಿನಗಳ ಗೃಹಬಂಧನಕ್ಕೆ ಒಳಗಾಗುವಂತೆ ಸೂಚಿಸಿದ್ದರು ಕೂಡ ಹಲವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿವೆ. ನಾಗರೀಕರು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಮಾರ್ಚ್ 11ರ ನಂತರದಲ್ಲಿ ರಾಜ್ಯಕ್ಕೆ ಬಂದಿರುವವರ ಸಂಖ್ಯೆ ಸರಕಾರದ ಬಳಿಯಲ್ಲಿದೆ. ಆದರೆ ಅದಕ್ಕೂ ಮೊದಲು ಬಂದವರ ಲೆಕ್ಕ ಸರಕಾರದ ಬಳಿಯಿಲ್ಲ. ವಿದೇಶಿದಿಂದ ಬಂದವರ ಕೈಗೆ ಸೀಲ್ ಹಾಕಿದ್ದರೂ ಕೂಡ ಸಾರ್ವಜನಿಕವಾಗಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇಂತವರ ವಿರುದ್ದ ಕಾನೂನು ಕ್ರಮಕೈಗೊಳ್ಳುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯವಹಿಸುತ್ತಿವೆ.

ಕ್ವಾರಂಟೈನ್ ತಪ್ಪಿಸಿಕೊಳ್ಳಲು ಮಾತ್ರೆ ತಿಂದಿದ್ದ ಪ್ರಯಾಣಿಕರು ?
ವಿದೇಶಗಳಿಂದ ತಾಯ್ನಾಡಿಗೆ ಮರಳುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ಇದನ್ನು ತಪ್ಪಿಸಿಕೊಳ್ಳಲು ಬಹುತೇಕರು ವಿಮಾನ ನಿಲ್ದಾಣಗಳನ್ನು ತಲುಪುವ ಒಂದು ಗಂಟೆಯ ಮೊದಲು ಮಾತ್ರೆಗಳನ್ನು ತಿನ್ನುತ್ತಾರೆ. ಇದರಿಂದ ಥರ್ಮಲ್ ಸ್ಕ್ರೀನಿಂಗ್ ವೇಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗೋದೇ ಇಲ್ಲಾ. ತಮಿಳುನಾಡಿನ ವಕೀಲರೊಬ್ಬರು ಇಂತಹ ಅಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.

ವಿದೇಶದಿಂದ ಬರುತ್ತಿರುವ ಕೆಲ ಭಾರತೀಯರು ಕೊರೋನಾ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸುತ್ತಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ವಿಮಾನ ಲ್ಯಾಂಡಿಂಗ್ ಕೇವಲ 1 ಗಂಟೆ ಇರುವಾಗ ಅವರು ಜ್ವರ ಕಡಿಮೆಯಾಗುವ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದರು. ಈ ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸಿದಾಗ ಜ್ವರದ ತೀವ್ರತೆ ಕಡಿಮೆಯಾಗುತ್ತದೆ. ಹೀಗಾಗಿ ಥರ್ಮಲ್ ಸ್ಕ್ಯಾನರ್ ನಲ್ಲಿ ಫಲಿತಾಂಶ ಸರಿಯಾಗಿ ಲಭ್ಯವಾಗದ ಪರಿಣಾಮ ಇವರೆಲ್ಲ ಪಾಸ್ ಆಗುತ್ತಿದ್ದಾರೆ. ಹೀಗೆ 10 ಮಂದಿ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ತಿಳಿಸಿದ್ದಾರೆ. ಹೀಗೆ ಹೋಮ್ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡವರು ಇಂದು ನಮ್ಮ ನಿಮ್ಮ ಬಳಿಯೂ ಸುತ್ತುತ್ತಿರಬಹುದು. ಇದರಿಂದಾಗಿ ಕೊರೊನಾ ಎಲ್ಲೆಡೆ ಹರಡುವ ಭೀತಿ ಎದುರಾಗಿದೆ.

Leave A Reply

Your email address will not be published.