ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ…! ಎರಡನೇ ಡೋಸ್ ಪಡೆಯೋರಿಗೆ ಕೋವಾಕ್ಸಿನ್ ಸ್ಟಾಕ್ ಇಲ್ಲ…!

ಬೆಂಗಳೂರು: ಕೊರೋನಾ ಮೊದಲನೇ ಅಲೆ ಎದುರಿಸಲು ವಿಫಲವಾಗಿದ್ದ ಸರ್ಕಾರ ಎರಡನೇ ಅಲೆ ಎದುರಿಸಲು ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಸೋತು ಹೋಗಿತ್ತು. ಅಷ್ಟೇ ಅಲ್ಲ ಕನಿಷ್ಟ ಆಡಳಿತ ಜಾಣ್ಮೆ, ಯೋಜನೆ ಏನೂ ಇಲ್ಲದ ಸರ್ಕಾರ ಕೋವಾಕ್ಸಿನ್ ಲಸಿಕೆ ವಿತರಣೆಯಲ್ಲೂ ಅವಾಂತರ ಸೃಷ್ಟಿಸಿದ್ದು, ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಇದುವರೆಗೂ 86 ಲಕ್ಷದ 6 ಸಾವಿರದ 980 ಜನರು ಕೋವಾಕ್ಸಿನ್ ಲಸಿಕೆ ಪಡೆದುಕೊಂಡಿದ್ದಾರೆ. ಇವರೆಲ್ಲರಿಗೂ ಕೇವಲ ನಾಲ್ಕು ವಾರಗಳ ಹಂತದಲ್ಲಿ ಎರಡನೇ ಡೋಸ್ ಕೋವಾಕ್ಸಿನ್ ಲಸಿಕೆ ನೀಡಬೇಕಿದೆ. ಆದರೆ ಸರ್ಕಾರದ ವೈಫಲ್ಯದಿಂದ ಎರಡನೇ ಡೋಸ್ ಪಡೆಯಲು ಅಗತ್ಯ ಇಂಜಕ್ಷನ್ ಸಿಗದಂತಾಗಿದೆ.

ಸರ್ಕಾರದ ಇದುವರೆಗಿನ ಅಂಕಿಅಂಶಗಳ ಪ್ರಕಾರ ಮುಂದಿನ ವಾರದೊಳಗೆ ರಾಜ್ಯದ 60 ಲಕ್ಷ ಜನರು ಕೋವಾಕ್ಸಿನ್  ಲಸಿಕೆ ಪಡೆಯಬೇಕು. ಆದರೆ ಅರ್ಧ ಜನಕ್ಕೆ ಸಾಕಾಗುವಷ್ಟು ಲಸಿಕೆಯೂ ನಮ್ಮಲ್ಲಿ ಲಭ್ಯವಿಲ್ಲ.  ಈ ವಿಚಾರವನ್ನು ಸರ್ಕಾರಿ ಆಸ್ಪತ್ರೆಗಳೇ ಖಚಿತಪಡಿಸುತ್ತಿವೆ. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಅಭಿಯಾನ ನಡೆಯುತ್ತಿತ್ತು.

ಈ ವೇಳೆ ಕೋವಾಕ್ಸಿನ್ ಪಡೆದಿದ್ದ ಸಾವಿರಾರು ಜನರು ಎರಡನೇ ಡೋಸ್ ಗಾಗಿ ಆಗಮಿಸಿದ್ದರು. ಈ ವೇಳೆ ಕೋವಾಕ್ಸಿನ್ ಲಸಿಕೆ ಎರಡನೇ ಡೋಸ್ ಲಭ್ಯವಿಲ್ಲದಿರೋ ಸಂಗತಿ  ಬೆಳಕಿಗೆ ಬಂದಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ  ರಾಜ್ಯದ ಎಲ್ಲೆಡೆಯೂ ಎರಡನೇ ಡೋಸ್ ಲಭ್ಯವಿಲ್ಲ.

ಹೀಗಾಗಿ ಈಗ ಮೊದಲ ಡೋಸ್ ಪಡೆಯುತ್ತಿರುವವರಿಗೆ ಕೋವಿಶಿಲ್ಡ್ ಲಸಿಕೆ ನೀಡಲಾಗುತ್ತಿದೆ. ಕೋವಾಕ್ಸಿನ್ ಲಸಿಕೆ ಪಡೆದ ನಾಲ್ಕು ವಾರದಲ್ಲಿ ಎರಡನೇ ಡೋಸ್ ಹಾಗೂ ಕೋವಿಶಿಲ್ಡ್ ಲಸಿಕೆ ಪಡೆದ ಐದು ವಾರದಲ್ಲಿ ಎರಡನೇ ಡೋಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಮೊದಲು ಪಡೆದ ಡೋಸ್ ನಿಷ್ಪ್ರಯೋಜಕ ಆಗಬಹುದು.

ಹೀಗಾಗಿ ಈಗ ಕೋವಾಕ್ಸಿನ್ ಪಡೆದ ಲಕ್ಷಾಂತರ ಜನರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡೂ ಕಡೆಯಲ್ಲೂ ಲಸಿಕೆ ಸಿಗದೇ ಪರದಾಡುತ್ತಿದ್ದಾರೆ.

ಕೋವಾಕ್ಸಿನ್ ಮೊದಲ ಡೋಸ್ ಪಡೆದಷ್ಟು ಜನರಿಗೆ ಎರಡನೇ ಡೋಸ್ ನೀಡಲು ಕೋವಾಕ್ಸಿನ್ ಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಸರ್ಕಾರದಿಂದಾಗಿ ಜನರು ಮೊದಲ ಲಸಿಕೆ ಪಡೆದೂ ರೋಗಭೀತಿಯಿಂದ ನರಳುವಂತ ಸ್ಥಿತಿ ಎದುರಾಗಿದ್ದು, ಸರ್ಕಾರಕ್ಕೆ ಸೂಕ್ಷತೆ, ಆಡಳಿತದ ತಿಳುವಳಿಕೆ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.   

Comments are closed.