ಮಾಸ್ಕ್ ನಿಯಮ ಉಲ್ಲಂಘನೆ 2 ಕೋಟಿಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದ ಬಿಬಿಎಂಪಿ

0

ಬೆಂಗಳೂರು: ಲಾಕ್‍ಡೌನ್ ಅನ್ ಲಾಕ್ ಆಗಿ ಜನರು ಬೀದಿಗಿಳಿಯುತ್ತಿದ್ದಂತೆ ಕೊರೋನಾದ ಭಯವೂ ಮಾಯವಾಗುತ್ತಿದೆ. ಹೀಗಾಗಿ ಜನರು ಮಾಸ್ಕ್ ಇಲ್ಲದೇ ಬಿಂದಾಸ್ ಓಡಾಟ ಆರಂಭಿಸಿದ್ದಾರೆ. ಇಂಥ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ನಿಯಮ ಜಾರಿಗೆ ತಂದಿದೆ. ಕೊರೋನಾದಿಂದ ಬದುಕೇ ಸಂಕಷ್ಟದಲ್ಲಿರುವಾಗ ಈ ದುಬಾರಿ ದಂಡ ಪಾವತಿಸೋದು ಹೇಗೆ ಎಂದು ಗೊಣಗುತ್ತಲೇ ಜನ ಇದುವರೆಗೂ ಪಾವತಿಸಿರೋ ದಂಡ ಎಷ್ಟು ಗೊತ್ತಾ? ಬರೋಬ್ಬರಿ…ಎರಡು ಕೋಟಿ 82 ಲಕ್ಷ ರೂಪಾಯಿ.

ಕೊರೋನಾ ಜೊತೆಗೆ ಬದುಕು ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದ ರಾಜ್ಯ ಸರ್ಕಾರ ಅನ್ ಲಾಕ್ ಪ್ರಕ್ರಿಯೆ ನಡೆಸಿದೆ. ಇದರ ಅನ್ವಯ ಬೆಂಗಳೂರು ನಗರ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಜನರು ಮಾಸ್ಕ್ ಧರಿಸದೇ ಅಪಾಯಕ್ಕೆ ಆಹ್ವಾನ ನೀಡಲಾರಂಭಿಸಿದ್ದನ್ನು ಗಮನಿಸಿದ ನಗರಾಢಳಿತ ಬಿಬಿಎಂಪಿ ಮಾಸ್ಕ್ ಕಡ್ಡಾಯಗೊಳಿಸಿ, ಧರಿಸದವರಿಗೆ 200 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ಜನರು ಕ್ಯಾರೇ ಎನ್ನದೇ ಓಡಾಟ ಮುಂದುವರೆಸಿದ್ದರಿಂದ ಕೆಲ ದಿನಗಳಿಂದ ನಗರದಲ್ಲಿ ಮಾಸ್ಕ್ ಧರಿಸದವರಿಗೆ ಬರೋಬ್ಬರಿ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಹೀಗೆ ದುಬಾರಿ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್‍ಗಳು ಇದುವರೆಗೂ 2 ಕೋಟಿ 82 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಈ ದಂಡದ ಮೊತ್ತ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ, ಮಾಸ್ಕ್ ಕಡ್ಡಾಯ ನಿಯಮ ಉಲ್ಲಂಘನೆಯನ್ನು ಒಳಗೊಂಡಿದೆ. ಇದುವರೆಗೂ ನಗರದಲ್ಲಿ ಒಟ್ಟೂ 1.39,683 ಪ್ರಕರಣಗಳು ದಾಖಲಾಗಿದ್ದು, ಇವುಗಳಿಂದ ಸಂಗ್ರಹವಾದ ಒಟ್ಟು ದಂಡದ ಮೊತ್ತ 2 ಕೋಟಿ 82 ಲಕ್ಷದ 49 ಸಾವಿರದ 987 ರೂಪಾಯಿ.


ಇದರಲ್ಲಿ ಮಾಸ್ಕ್ ಹಾಕಿಕೊಳ್ಳದ 1 ಲಕ್ಷದ 24 ಸಾವಿರದ 616 ಜನರಿಗೆ ದಂಡ ವಿಧಿಸಲಾಗಿದ್ದು, ಇವರಿಂದ ಒಟ್ಟು 2 ಕೋಟಿ 52 ಲಕ್ಷದ 7,072 ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದ 15067 ಜನರಿಗೆ ದಂಡ ವಿಧಿಸಿ 30 ಲಕ್ಷದ 42 ಸಾವಿರದ 912 ರೂಪಾಯಿ ದಂಡ ಪಡೆಯಲಾಗಿದೆ. ಇನ್ನು ಬಿಬಿಎಂಪಿಯ ಈ ದುಬಾರಿ ದಂಡದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೊರೋನಾ ಪೀಡಿತರಿಗೆ ಸೂಕ್ತ ಆರೋಗ್ಯ ಸೌಲಭ್ಯ ಒದಗಿಸಲಾದ ಸರ್ಕಾರ ಹಾಗೂ ನಗರಾಢಳಿತ ದಂಡ ವಸೂಲಿಗೆ ಮಾತ್ರ ಮುಂಚೂಣಿಯಲ್ಲಿದೆ ಎಂದು ಟೀಕಿಸಿದೆ.

Leave A Reply

Your email address will not be published.