ಹೆಚ್ಚುತ್ತಿರುವ ಕೊರೊನಾ ಸೋಂಕು : ನಾಳೆ ದ.ಕ. ಸಂಪೂರ್ಣ ಬಂದ್

0

ಮಂಗಳೂರು : ಕೊರೊನಾ ಸೋಂಕು ಕರಾವಳಿಯಲ್ಲಿ ವ್ಯಾಪಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅದ್ರಲ್ಲೂ ಒಂದೇ ದಿನ ಎರಡು ಪ್ರಕರಣ ಪತ್ತೆಯಾಗುತ್ತಲೇ ಜಿಲ್ಲಾಡಳಿತ ಮಾರ್ಚ್ 28 (ನಾಳೆ) ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೊರೊನಾ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಾದ್ಯಂತ ನರೇಂದ್ರ ಮೋದಿ ಲಾಕ್ ಡೌನ್ ಆದೇಶ ಹೊರಡಿಸಿದ್ದರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ.

ಮಂಗಳೂರು ನಗರದ ಹಲವು ಕಡೆಗಳಲ್ಲಿ ಜನ ಸಂಚಾರ ಅಧಿಕವಾಗಿತ್ತು. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಆದ್ರೆ ಇದೀಗ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರಕರಣ ಪತ್ತೆಯಾಗೋ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಆರಂಭದಲ್ಲಿ ಭಟ್ಕಳ ಮೂಲದ ವ್ಯಕ್ತಿಗೆ ಕೊರೊನಾ ಪತ್ತೆಯಾಗಿತ್ತು.

ನಂತರ ದುಬೈನಿಂದ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಕೇರಳ ಮೂಲದ ಮೂವರಿಗೂ ಕೊರೊನಾ ದೃಢಪಟ್ಟಿತ್ತು. ಆದರೆ ನಾಲ್ವರು ಕೂಡ ಹೊರ ಜಿಲ್ಲೆಯವರು ಅಂತಾ ಕೊರೊನಾ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಲಘವಾಗಿ ಪರಿಗಣಿಸಿದ್ದರು. ಆದ್ರೀಗ ಜಿಲ್ಲೆಯಲ್ಲಿ ಬಂಟ್ವಾಳದ 10 ತಿಂಗಳ ಮಗು ಹಾಗೂ ಪುತ್ತೂರಿನ 21 ವರ್ಷ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಹೀಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನಲ್ಲಿ ಕ್ರಮಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಯಾವುದೇ ಅಂಗಡಿ ಮುಂಗಟ್ಟು ತೆರೆಯದಂತೆ ಎಚ್ಚರವಹಿಸಲಾಗುತ್ತಿದೆ. ಮನೆಯಿಂದ ಯಾರೊಬ್ಬರೂ ಕೂಡ ಹೊರಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ ನಾಳೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ.

Leave A Reply

Your email address will not be published.