ಕೊರೊನಾ ಔಷಧವೆಂದು ಮೆಥೆನಾಲ್ ಸೇವನೆ : 300ಕ್ಕೂ ಅಧಿಕ ಮಂದಿ ಸಾವು, 1,000 ಅಧಿಕ ಅಸ್ವಸ್ಥ

0

ಇರಾನ್ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ವಿಶ್ವದ ನೂರಾರು ರಾಷ್ಟ್ರಗಳು ಡೆಡ್ಲಿ ಕೊರೊನಾಕ್ಕೆ ತತ್ತರಿಸಿ ಹೋಗಿವೆ. ಇದರ ನಡುವಲ್ಲೇ ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ. ಹೀಗೆಯೇ ಹಬ್ಬಿದ ಸುಳ್ಳು ಸುದ್ದಿಯೊಂದು ಇರಾನ್ ದೇಶದಲ್ಲಿ 300ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ.

ಚೀನಾದಲ್ಲಿ ಕಾಣಸಿಕೊಂಡಿದ್ದ ಕೊರೊನಾ ಮಹಾಮಾರಿ ಇಂದು ವಿಶ್ವವನ್ನೇ ನಲುಗಿಸಿದೆ. ಅದ್ರಲ್ಲೂ ಇರಾನ್‌ನಲ್ಲಿ ಇದುವರೆಗೂ 32,300 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. 2,300ಕ್ಕೂ ಹೆಚ್ಚು ಜನ ಕೊರೊನಾದಿಂದ ಬಲಿಯಾಗಿದ್ದಾರೆ.

ದಿನೇ ದಿನೇ ಇರಾನ್ ನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇರಾನ್ ಸರಕಾರ ಕೊರೊನಾ ನಿಯಂತ್ರಣಕ್ಕೆ ಹರಸಾಹಸಪಡುತ್ತಿದೆ. ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಿದ್ದರೂ ಕೂಡ ಕೊರೊನಾ ಸೋಂಕಿಗೆ ಇಂದಿಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಇರಾನ್ ಜನತೆ ಕೊರೊನಾ ಭಯದಿಂದ ತತ್ತರಿಸಿರುವಾಗಲೇ ವಿಸ್ಕಿ ಮತ್ತು ಜೇನುತುಪ್ಪದಿಂದ ಕೊರೊನಾ ವೈರಸ್‌ನಿಂದ ಗುಣಮುಖವಾಗಬಹುದು ಅನ್ನೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಆದರೆ ಇರಾನ್ ದೇಶದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಆದರೆ, ಆಲ್ಕೋಹಾಲ್‌ ಆಧಾರಿತ ಸ್ಯಾನಿಟೈಜರ್‌ ಬಳಸಿದರೆ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದೆಂಬ ಸಂದೇಶವೂ ಅದರಲ್ಲಿತ್ತು.

ಜನ ಆಲ್ಕೋಹಾಲ್‌ನಿಂದ ದೇಹದಲ್ಲಿನ ವೈರಸ್‌ನ್ನು ಕೊಲ್ಲಬಹುದು ಎಂದು ತಿಳಿದುಕೊಂಡು ವಿಷಕಾರಿ ಮೆಥನಾಲ್‌ ಕುಡಿದು ಬರೋಬ್ಬರಿ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇರಾನಿನ ಕ್ಯೂಜೆಸ್ತಾನ್‌, ಶಿರಾಜ್‌, ಕರಜ್‌ ಮತ್ತು ಯಜ್ದ್‌ ಪ್ರಾಂತ್ಯದಲ್ಲಿ ಮೆಥೆನಾಲ್ ಸೇವಿಸಿರೋ ಸಾವಿರಕ್ಕೂ ಅಧಿಕ ಮಂದಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಇರಾನ್ ನಲ್ಲಿ ಮದ್ಯಪಾನ ನಿಷೇಧಿಸಿದ್ದರೂ ಕೂಡ ಜನರ ಕೈಗೆ ಮೆಥೆನಾಲ್ ಹೇಗೆ ಸಿಕ್ಕಿದೆ ಅನ್ನೋದು ಇನ್ನೂ ನಿಗೂಢವಾಗಿದೆ. ಮದ್ಯ ನಿಷೇಧಿಸಿದ ಸರಕಾರವೇ ಜನರಿಗೆ ಮೆಥನಾಲ್‌ ಒದಗಿಸಿರುವ ಅನುಮಾನವನ್ನೂ ಹಲವರು ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರಾಚ್ಯ ದೇಶಗಳ ಪೈಕಿ ಇರಾನ್‌ನಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿವೆ. ಕೊರೊನಾ ಹರಡುವ ಭೀತಿಯಿಂದ ಅಶಿಕ್ಷಿತರು ಇಂಟರ್‌ನೆಟ್‌ನಲ್ಲಿ ಬಂದ ವದಂತಿಗಳನ್ನು ನಂಬಿ ಮೆಥನಾಲ್‌ ಇರುವ ಆಲ್ಕೋಹಾಲ್‌ ಕುಡಿದು ಸಾವಿಗೀಡಾಗಿದ್ದಾರೆ.

Leave A Reply

Your email address will not be published.