ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ…! ದಂಡದ ಮೊತ್ತ 2 ಸಾವಿರ ರೂಪಾಯಿಗೆ ಹೆಚ್ಚಿಸಿದ ಸರ್ಕಾರ..!

ನವದೆಹಲಿ: ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ  ದೆಹಲಿ ಸರ್ಕಾರ ಮತ್ತೊಮ್ಮೆ ಲಾಕ್ ಡೌನ್   ಮಾಡಲು ಕೇಂದ್ರದ ಅನುಮತಿ ಕೋರಿದೆ. ಅಷ್ಟೇ ಅಲ್ಲ ಜನರಲ್ಲಿ ಮಾಸ್ಕ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಂಡದ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ.

ಈಗಾಗಲೇ ವಾಯುಮಾಲಿನ್ಯದಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸೋಂಕು ನಿಯಂತ್ರಣ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಮಾರುಕಟ್ಟೆ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಲು ಅನುಮತಿ ಕೋರಿ ಕೇಜ್ರಿವಾಲ್ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.

ಈ ಮಧ್ಯೆ ಲಾಕ್ ಡೌನ್ ಸಡಿಲಿಕೆಯಿಂದ ಮನೆಯಿಂದ ಹೊರಬರುತ್ತಿರುವ ಜನರು ಮಾಸ್ಕ್ ಧರಿಸದೇ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಧರಿಸದವರಿಗೆ ಇದುವರೆಗೂ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಶೇಕಡಾ ನಾಲ್ಕರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಜನರಲ್ಲಿ ಮಾಸ್ಕ್ ಹಾಗೂ ಕೊರೋನಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದುವರೆಗೂ ಮಾಸ್ಕ್ ಧರಿಸದವರಿಗೆ ವಿಧಿಸಲಾಗುತ್ತಿದ್ದ 500 ರೂಪಾಯಿ ದಂಡದ ಬದಲು ಇನ್ಮುಂದೆ 2 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಹೇಳಿದ್ದಾರೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವುದು ವಾಡಿಕೆ.ಈ ಭಾರಿ ಇದರೊಂದಿಗೆ ಕೊರೋನಾ ಕೂಡ ಸೇರಿಕೊಂಡಿದ್ದು, ಸೋಂಕಿನ ನಿಯಂತ್ರಣದಲ್ಲಿ ಕೇಜ್ರಿವಾಲ್ ಸರ್ಕಾರ ವಿಫಲವಾಗಿದೆ. ಹೀಗಾಗಿ ಇದೀಗ ಮತ್ತೊಮ್ಮೆ ಲಾಕ್ ಡೌನ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವುದರ ಮೇಲೆ ನಿಯಂತ್ರಣ ಹೇರಲು ಸರ್ಕಾರ ನಿಯಂತ್ರಿಸಿದೆ.

Comments are closed.