42 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ ! ಬರೋಬ್ಬರಿ 60 ಮಕ್ಕಳಿಗೆ ಹಾಲುಣಿಸಿದ ಮಹಾತಾಯಿ

ಮುಂಬೈ: ಜನಿಸಿದ ಮಗುವಿಗೆ ಎದೆಹಾಲು ಉತ್ತಮ ಆಹಾರ. ಸರಿಯಾದ ಪ್ರಮಾಣದಲ್ಲಿ ಎದೆ ಹಾಲು ಸಿಕ್ಕರೆ ಮಕ್ಕಳು ಆರೋಗ್ಯವಂತ ರಾಗಿರುತ್ತಾರೆ. ಆದರೆ ಬಹುತೇಕ ಶಿಶುಗಳಿಗೆ ಎದೆಹಾಲು ಸಿಗುತ್ತಿಲ್ಲ. ಆದ್ರೆ ಇಲ್ಲೊಬ್ಬರು ಸಿನಿಮಾ ನಿರ್ಮಾಪಕಿ ಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡುವ ಮೂಲಕ 60 ಮಕ್ಕಳ ಪಾಲಿಗೆ ಮಹಾತಾಯಿ ಎನಿಸಿಕೊಂಡಿದ್ದಾರೆ.

ಬಾಲಿವುಡ್ ನಿರ್ಮಾಪಕಿ ನಿಧಿ ಪಾರ್ಮಾರ್ ಹೀರಾನಂದಾನಿ ಎದೆಹಾಲು ದಾನ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್ ಅಭಿನಯದ ‘ಸಾಂಡ್ ಕೀ ಆಂಖ್’ಸಿನಿಮಾ ನಿರ್ಮಾಣ ಮಾಡಿದ್ದ ನಿಧಿ ಪಾರ್ಮರ್, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್‍ಡೌನ್ ಬಳಿಕ ಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ. ಈ ಮೂಲಕ ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಬಾಣಂತಿಯರ ಮಕ್ಕಳಿಗೆ ಆಪದ್ಬಾಂಧವರಾಗಿದ್ದಾರೆ.

ನಿಧಿ ಪಾರ್ಮರ್ ಫೆಬ್ರವರಿ 21ರಂದು ವೀರ್ ಅನ್ನೋ ಗಂಡು ಮುಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಹಾಲುಣಿಸಿದ ನಂತರವೂ ಹಾಲು ಹೆಚ್ಚುತ್ತಿತ್ತು. ಇದನ್ನು ಗಮನಿಸಿದ ನಿಧಿ ಎದೆಹಾಲನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆಯಲ್ಲಿ ಮುಂಬೈನ ವೈದ್ಯರೋರ್ವರನ್ನು ಸಂಪರ್ಕಿಸಿದಾಗ ನಿಧಿ ಕಾರ್ಯಕ್ಕೆ ವೈದ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

ಅಲ್ಲದೇ ಎದೆ ಹಾಲು ಸುಮಾರು 3 ತಿಂಗಳ ಕಾಲ ಶೇಖರಿಸಿಡಬಹುದು ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ನಿಧಿ ಆಸ್ಪತ್ರೆಯೊಂದರ ಸಹಕಾರದೊಂದಿಗೆ ಎದೆಹಾಲನ್ನು ಸಂಗ್ರಹ ಮಾಡುವ ಕಾರ್ಯವನ್ನು ಮಾಡಿದ್ದಾರೆ. ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 42 ಲೀಟರ್ ಎದೆಹಾಲನ್ನು ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದಾರೆ.

ಹಲವು ಆಸ್ಪತ್ರೆಗಳು ಎದೆ ಹಾಲನ್ನು ಹಣಕ್ಕೆ ಮಾರಾಟ ಮಾಡುತ್ತಿವೆ. ಪ್ರತೀ 100 ಎಂಎಲ್ ಹಾಲಿಗೆ 1,500 ರೂಪಾಯಿಯಿಂದ 2,000 ರೂಪಾಯಿಯ ವರೆಗೂ ಮಾರಾಟ ಮಾಡುತ್ತಿವೆ. ಆದರೆ ಸೂರ್ಯ ಆಸ್ಪತ್ರೆ ಮಾತ್ರ ಯಾವುದೇ ಹಣವನ್ನೂ ನೀಡದೆ ಮಕ್ಕಳಿಗೆ ಎದೆಹಾಲನ್ನು ನೀಡುವ ಕಾರ್ಯವನ್ನು ಮಾಡುತ್ತಿದೆ. ಇದೀಗ ತಾನು 42 ಲೀಟರ್ ಹಾಲನ್ನು ದಾನ ಮಾಡಿದ್ದು, ಮುಂದಿನ 2021ರ ಫೆಬ್ರವರಿ ತಿಂಗಳ ವರೆಗೂ ಕೂಡ ಎದೆ ಹಾಲು ದಾನ ಮಾಡುವುದಾಗಿ ತಿಳಿಸಿದ್ದಾರೆ.

ನಿಧಿ ಫಾರ್ಮರ್ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 60ಕ್ಕೂ ಅಧಿಕ ಮಕ್ಕಳ ಪಾಲಿಗೆ ಈಕೆ ಮಹಾತಾಯಿ ಎನಿಸಿಕೊಂಡಿದ್ದಾರೆ. ಸಮಾಜದಲ್ಲಿ ಎದೆ ಹಾಲಿನ ಮಹತ್ವವನ್ನು ಸಾರುವುದರ ಜೊತೆಗೆ ಇತರರಿಗೆ ಎದೆ ಹಾಲು ದಾನ ಮಾಡುವಂತೆಯೂ ಪ್ರೇರೇಪಿಸುತ್ತಿದ್ದಾರೆ.

Comments are closed.