ಸಚಿವ ಸಂಪುಟ ವಿಸ್ತರಣೆ ಪ್ರಹಸನ….! ಇನ್ನೇರಡು ದಿನದಲ್ಲಿ ಎಲ್ಲವೂ ಅಂತಿಮವಾಗುತ್ತೆ ಎಂದ ಸಿಎಂ…!!

ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ  ಇಂದು-ನಾಳೆ ಎನ್ನುತ್ತಲೇ ಸಾಗುತ್ತಿದ್ದು, ಸಚಿವರಾಗುವ ಶಾಸಕರ ಕನಸು ಸಧ್ಯ ಈಡೇರುವ ಲಕ್ಷಣವೇ ತೋರುತ್ತಿಲ್ಲ.  ಈ ಮಧ್ಯೆ ಎಲ್ಲ ಅಸಮಧಾನಿತರಿಗೆ ತಮ್ಮ ಭರವಸೆ ಮೂಲಕ ಸಮಾಧಾನ ಹೇಳಿರುವ ಬಿಎಸ್ವೈ ಇನ್ನೆರಡು ದಿನದಲ್ಲಿ ನೂತನ ಸಚಿವರು ಯಾರು ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬಿಎಸ್ವೈ, ಸಚಿವ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ನಾನು ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ. ಇನ್ನೆರಡು ದಿನದಲ್ಲಿ ಸಚಿವರ ಲಿಸ್ಟ್ ಹೊರಬರಲಿದೆ ಎಂದಿದ್ದಾರೆ.

ಬುಧವಾರ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಜೊತೆ ದೆಹಲಿಗೆ ತೆರಳಿದ್ದ ಸಿಎಂ ಬಿಎಸ್ವೈ ಖಾಲಿ ಕೈಯಲ್ಲಿ ಹಿಂತಿರುಗಿದ್ದರು. ಇದಾದ ಬೆನ್ನಲ್ಲೇ ಇನ್ನೆರಡು ದಿನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದು ಬಿಎಸ್ವೈ ಹೇಳಿರೋದು ಈ ಭಾರಿಯೂ ಸಚಿವ ಸಂಪುಟ ವಿಸ್ತರಣೆ ಆಗೋಲ್ಲ ಅನ್ನೋ ಮುನ್ಸೂಚನೆ ನೀಡುವಂತಿದೆ.

ಮೂಲಗಳ ಪ್ರಕಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಥವಾ ಪುನರ್ ರಚನೆಗೆ ಹೈಕಮಾಂಡ್ ಮನಸ್ಸು ಮಾಡುತ್ತಿಲ್ಲ. ಸದ್ಯ ಈಗ ಇರುವಂತೆಯೇ ಮುಂದುವರೆಸಿಕೊಂಡು ಹೋಗುವಂತೆ ಬಿಎಸ್ವೈಗೆ ತಾಕೀತು ಮಾಡಿದೆ ಎನ್ನಲಾಗುತ್ತಿದೆ. ಆದರೆ ಸಚಿವರಾಗಲು ತುದಿಗಾಲಲ್ಲಿ ನಿಂತಿರುವ ಆಕಾಂಕ್ಷಿತರು ಬಂಡಾಯ ಏಳಬಾರದು ಎಂಬ ಕಾರಣಕ್ಕೆ ಬಿಎಸ್ವೈ ಎಲ್ಲರನ್ನು ಇಂದು-ನಾಳೆ ಎಂದು ಸಮಾಧಾನಿಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ವರಸೆ ಇತ್ತೀಚಿಗೆ ಬದಲಾಗಿದ್ದು, ಎಲ್ಲಾ ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳುವಾಗ ಸಿಎಂ ಬಿಎಸ್ವೈಮಾತಿಗಿಂತ ಆರ್.ಎಸ್.ಎಸ್ ಹಾಗೂ ಪಕ್ಷದ ವರಿಷ್ಠರ ಮಾತಿಗೆ ಬೆಲೆ ನೀಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಇನ್ನಷ್ಟು ಕಾಲ ಮುಂದುವರೆಯುವ ಲಕ್ಷಣವಿದೆ.

ಇನ್ನೊಂದೆಡೆ ಶಾಸಕ ರಮೇಶ್ ಜಾರಕಿಹೊಳಿ ಮಾತು ಕೇಳಿ ನಾವು ಕೆಟ್ವಿ ಎಂಬ ನಿರ್ಧಾರಕ್ಕೆ ಕೆಲ ಶಾಸಕರು ಬಂದಿದ್ದು, ಸಚಿವ ಸಂಪುಟ ಸೂಕ್ತ ಸಮಯದಲ್ಲಿ ವಿಸ್ತರಣೆಯಾಗಿ ಆಕಾಂಕ್ಷಿತರು ಸಚಿವ ಸ್ಥಾನಕ್ಕೆ ಏರದೇ ಹೋದಲ್ಲಿ ಮತ್ತೊಮ್ಮೆ ಕರ್ನಾಟಕದಲ್ಲಿ ರಾಜಕೀಯ ಸ್ಥಿತ್ಯಂತರಗಳು ಆರಂಭವಾದ್ರೂ ಅಚ್ಚರಿಯೇನಿಲ್ಲ.

Comments are closed.