ಜನವರಿ 1ರಿಂದಲೇ ಶಾಲೆ, ವಿದ್ಯಾಗಮ ಆರಂಭ : ಶಾಲಾರಂಭಕ್ಕೂ ಮುನ್ನ ಶಿಕ್ಷಕರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ

ಬೆಂಗಳೂರು : ಹೊಸ ಕೊರೊನಾ ವೈರಸ್ ಸೋಂಕಿನ ಆತಂಕದ ನಡುವಲ್ಲಿಯೇ ರಾಜ್ಯದಲ್ಲಿ ಜನವರಿ 1 ರಿಂದಲೇ ಎಸ್ಎಸ್ಎಲ್ ಹಾಗೂ ದ್ವಿತೀಯ ಪಿಯುಸಿ ತರಗತಿಗಳ ಜೊತೆಗೆ ವಿದ್ಯಾಗಮ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಾಲಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಇಓ ಹಾಗೂ ಡಿಡಿಪಿಐಗಳ ಜೊತೆಗೆ ಸಭೆಯನ್ನು ನಡೆಸಲಾಗಿದ್ದು, ಎಲ್ಲರೂ ಕೂಡ ಉತ್ತಮ ಬೆಂಬಲ ನೀಡುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೇ ಹಲವು ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಶಾಲಾರಂಭಕ್ಕೆ 72 ಗಂಟೆಗಳ ಮೊದಲು ಶಿಕ್ಷಕರು ಕಡ್ಡಾಯವಾಗಿ ಆರ್ ಟಿಪಿಸಿಆರ್ ಟೆಸ್ಟ್ ನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಅಲ್ಲದೇ 55 ವರ್ಷ ಮೀರಿದ ಶಿಕ್ಷಕರು ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದ್ದಾರೆ.

ಜನವರಿ 1ರಿಂದಲೇ ಶಾಲೆ ಹಾಗೂ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದರೂ ಕೂಡ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಬೇಕೆಂದಿಲ್ಲ. ತರಗತಿಗಳಿಗೆ ಹಾಜರಾಗುವಂತೆ ಯಾರಿಗೂ ಕೂಡ ಬಲವಂತ ಮಾಡುವಂತಿಲ್ಲ. ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಚಂದನದ ಪಾಠ, ಆನ್ ಲೈನ್ ತರಗತಿ ಹಾಗೂ ಪೋಷಕರಿಂದಲೇ ಪಾಠ ಹೇಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ತರಗತಿಗಳಿಗೆ ಹಾಜರಾಗಲು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರವನ್ನು ತರಲೇಬೇಕು. ಪೋಷಕರ ಒಪ್ಪಿಗೆ ಪತ್ರವನ್ನು ಹೊಂದಿಲ್ಲದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶವನ್ನು ನೀಡಲಾಗುವುದಿಲ್ಲ ಎಂದಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಸಿಯೂಟದ ಯೋಜನೆ ಹಾಗೂ ಕ್ಷೀರ ಭಾಗ್ಯ ಯೋಜನೆಯನ್ನು ನೀಡುವಂತಹ ಬೇಡಿಕೆ ಬಂದಿದ್ದರೂ ಕೂಡ ಕೇಂದ್ರ ಸರಕಾರದ ಕೋವಿಡ್ ಮಾರ್ಗಸೂಚಿ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಸದ್ಯಕ್ಕೆ ಬಿಸಿಯೂಟ ಹಾಗೂ ಹಾಲನನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಬಿಸಿಯೂಟದ ಪರಿಕರಗಳನ್ನು ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದ್ದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಲಾಗಿದ್ದು, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯನ್ನು ಪಾಲಿಸಲಾಗುತ್ತಿದೆ. ಇದೀಗ ಶಾಲಾರಂಭ ಹಾಗೂ ವಿದ್ಯಾಗಮ ಯೋಜನೆಯನ್ನೂ ಕೂಡ ಯಶಸ್ವಿಯಾಗಿ ಮಾಡಲಾಗುತ್ತದೆ ಎಂದಿದ್ದಾರೆ.

Comments are closed.