ಮಕ್ಕಳೇ ಶಾಲೆಗೆ ಹೋಗಲು ಸಿದ್ಧವಾಗಿ…! ಕರ್ನಾಟಕದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಸಿದ್ಧತೆ…!!

ಬೆಂಗಳೂರು: ಕೊರೋನಾದಿಂದ ಬಹುತೇಕ ಜಗತ್ತಿನಾದ್ಯಂತ ಶೈಕ್ಷಣಿಕ ಚಟುವಟಿಕೆ ಸ್ತಬ್ಧವಾಗಿದೆ. ಈ ಮಧ್ಯೆ  ಕರ್ನಾಟಕದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಿ ಶಾಲೆ-ಕಾಲೇಜುಗಳ ಬಾಗಿಲು ತೆರೆಯಲು ಚಿಂತನೆ ನಡೆದಿದ್ದು, ನವೆಂಬರ್ 2 ರಂದು ಮಹತ್ವದ ಸಭೆ ನಡೆಯಲಿದೆ.

ನವೆಂಬರ್ ದಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ ನವೆಂಬರ್ 17 ರಿಂದ ಪದವಿ ತರಗತಿಗಳು ಆರಂಭವಾಗಲಿದೆ. ಇದರೊಂದಿಗೆ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ  ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಶಾಲೆಗಳನ್ನು ಆರಂಭಿಸುವ ತೀರ್ಮಾನದ ಸಾಧಕ-ಬಾಧಕಗಳನ್ನು ಚರ್ಚಿಸಲು ನವೆಂಬರ್ 2 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್  ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು , ಶಿಕ್ಷಣ ತಜ್ಞರು ಹಾಗೂ ಆರೋಗ್ಯಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಕೊವೀಡ್ ಸೋಂಕಿನ ಪ್ರಮಾಣ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ  ಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ನವೆಂಬರ್ 2 ರಿಂದ ಶಿಕ್ಷಕರು ಹಾಗೂ ಸಿಬ್ಬಂದಿ ಶಾಲೆಗಳಲ್ಲಿ ಹಾಜರಿರಬೇಕು.  ಹಾಗೂ ಶಾಲೆಗಳ ಸ್ವಚ್ಛತೆ ಸೇರಿದಂತೆ ಇತರ ಚಟುವಟಿಕೆ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ನವೆಂಬರ್ 2 ರಂದು ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಅಂದು ಶಾಲೆಗಳ ಆರಂಭದ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೇ ರಾಜ್ಯದ ಹಲವೆಡೆ ಮಕ್ಕಳು ಶಾಲೆಗಳಿಲ್ಲದ ಕಾರಣಕ್ಕೆ ಕೂಲಿ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿದೆ.

Comments are closed.