ಮುನಿರತ್ನ ಯಾವ ಗೆಲುವು ಸ್ವಂತ ವರ್ಚಸ್ಸಿನಿಂದಲ್ಲ…! ಕಾಂಗ್ರೆಸ್ ಪಕ್ಷದಿಂದಲೇ ಗೆದ್ದಿದ್ದು…!


ಬೆಂಗಳೂರು: ಇನ್ನೇನು ಆರ್.ಆರ್.ನಗರ ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಒಂದು ಕಾಲದ ಆಪ್ತನಾಗಿದ್ದ ಮಾಜಿ ಶಾಸಕ ಮುನಿರತ್ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಮುನಿರತ್ನ ಯಾವತ್ತೂ ಸ್ವಂತ ವರ್ಚಸ್ಸಿನಿಂದ ಗೆದ್ದಿಲ್ಲ. ಕಾಂಗ್ರೆಸ್ ಪಕ್ಷವೇ ಅವರ ಗೆಲುವಿಗೆ ಕಾರಣ ಎಂದು ಟ್ವೀಟ್ ಮಾಡಿದ್ದಾರೆ.

ಆರ್.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಮಾಜಿ ಸಿಎಂ ಸಿದ್ಧರಾಮಯ್ಯ ಚುನಾವಣಾ ಪ್ರಚಾರದ ಬಳಿಕ ಸರಣಿ ಟ್ವೀಟ್ ಮೂಲಕ ಮುನಿರತ್ನ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಮುನಿರತ್ನ ಎರಡು ಭಾರಿ ಶಾಸಕನಾಗಲು ಕಾಂಗ್ರೆಸ್ ಪಕ್ಷ ಕಾರಣವೇ ಹೊರತು ಮುನಿರತ್ನ ವೈಯಕ್ತಿಕ ವರ್ಚಸ್ಸಿನಿಂದ ಅವರು ಶಾಸಕರಾಗಿಲ್ಲ ಎಂದಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್.ನಗರದ ಅಭಿವೃದ್ಧಿಗೆ  2,000 ಕೋಟಿ ರೂಪಾಯಿ ಅನುದಾನ ನೀಡಿದ್ದೆ, ಆದರೂ ನಮಗೆ ದ್ರೋಹ ಮಾಡಿದ್ರಲ್ಲ ಮುನಿರತ್ನ ಅವರೇ, ಅಂಥಾ ಅನ್ಯಾಯ ನಾವೇನು ಮಾಡಿದ್ವಿ ನಿಮ್ಗೆ ಅಂತ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ತನ್ನ ವಿರೋಧಿಗಳನ್ನು ಬೆದರಿಸಿ, ಹೆದರಿಸಿ ತಾನು ಶಾಸಕನಾಗಬಹುದು ಎಂದು ಮುನಿರತ್ನ ಭಾವಿಸಿದ್ದರೇ, ಅವರಂಥ ಮೂರ್ಖರು ಇನ್ನೊಬ್ಬರಿಲ್ಲ ಎಂದಿರುವ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದ್ರೇ ಮುಂದಿನ ದಿನದಲ್ಲಿ ನಿಮಗೆ ಕಷ್ಟವಿದೆ ಎಂದು ಪೊಲೀಸರ ವಿರುದ್ಧವೂ ಕಿಡಿಕಾರಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್ ತನ್ನ ತಾಯಿ ಎನ್ನುತ್ತಿದ್ದ ಮುನಿರತ್ನ, ಈಗ ತಾಯಿಯಂತಹ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮುನಿರತ್ನ ವಿರುದ್ಧ ಕುಟುಕಿದ್ದಾರೆ.  ಒಂದು ಕಾಲದಲ್ಲಿ ಸಿದ್ಧರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮುನಿರತ್ನ ಕಾಂಗ್ರೆಸ್ ತೊರೆಯುತ್ತಿದ್ದಂತೆ ಸಿದ್ಧರಾಮಯ್ಯ ಅವರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ.

Comments are closed.