ರಾಜಕೀಯ ಪ್ರವೇಶಕ್ಕೆ ನೋ ಎಂದ ಎಂಬಿಎ ಪದವೀಧರ…! ಬಿಜೆಪಿ ಟಿಕೇಟ್ ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕ..!!

ಕೇರಳ: ಪಂಚ ರಾಜ್ಯಗಳ ಚುನಾವಣೆ ಕಾವೇರುತ್ತಿದ್ದು, ಕೇರಳ ಸೇರಿದಂತೆ ಹಲವೆಡೆ ಪಕ್ಷಗಳಲ್ಲಿ ಟಿಕೇಟ್ ಗಾಗಿ ಫೈಟ್ ನಡೆಯುತ್ತಿದೆ. ಹೀಗಿರುವಾಗಲೇ ಕೇರಳದಲ್ಲಿ ಬಿಜೆಪಿ ನೀಡಿದ ವಿಧಾನಸಭೆ ಟಿಕೇಟ್ ನಿರಾಕರಿಸುವ ಮೂಲಕ ಎಂಬಿಎ ಪದವೀಧರನೊಬ್ಬ ಅಚ್ಚರಿ ಮೂಡಿಸಿದ್ದಾನೆ.

ಕೇರಳದ ಪಣಿಯಾ ಬುಡಕಟ್ಟು ಸಮುದಾಯದಿಂದ ಮೊದಲ ವಿದ್ಯಾವಂತ ಹಾಗೂ ಎಂಬಿಎ ಪದವೀಧರನಾಗಿರುವ  31 ವರ್ಷದ ಮಣಿಕುಟ್ಟನ್ ಫಣಿಯನ್  ಬಿಜೆಪಿಯಿಂದ ಟಿಕೇಟ್ ಪಡೆದ ಸಾಮಾನ್ಯ ವ್ಯಕ್ತಿ. ಆದರೆ ಈತ ತಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ದೂರವಾಣಿ ಕರೆ ಮಾಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಬಿಜೆಪಿ ಇತ್ತೀಚಿಗೆ ಬಿಡುಗಡೆಮಾಡಿರುವ ಕೇರಳದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಣಿಕುಟ್ಟನ್ ಗೆ ಸ್ಥಾನ ನೀಡಲಾಗಿತ್ತು. ಈ ವೇಳೆ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮನಂತವಾಡಿ ಕ್ಷೇತ್ರದಿಂದ ಮಣಿಕುಟ್ಟನ್ ಗೆ ಬಿಜೆಪಿ ಟಿಕೇಟ್ ನೀಡಿತ್ತು. ಆದರೆ ಆತ ನಯವಾಗಿ ಈ ರಾಜಕೀಯದ ಅವಕಾಶವನ್ನು ನಿರಾಕರಿಸಿದ್ದಾನೆ.

ಕೇಂದ್ರದ ಬಿಜೆಪಿ ನಾಯಕರು ನನ್ನನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಆದರೆ ನಾನು ಒಂದು ಸ್ಥಿರವಾದ ಉದ್ಯೋಗ ಪಡೆದು ಕುಟುಂಬದ ಜೊತೆ ಇರಲು ಬಯಸುತ್ತೇನೆ. ಬಿಜೆಪಿ ನನ್ನಂತ ಸಾಮಾನ್ಯವಾದ ವ್ಯಕ್ತಿಗೆ ಅವಕಾಶ ನೀಡಿದ್ದಕ್ಕೆ ಸಂತೋಷವಿದೆ. ಆದರೆ ಈ ಅವಕಾಶವನ್ನು ನಾನು ಸ್ವೀಕರಿಸಲಾರೆ ಎಂದಿದ್ದಾರೆ.

ಈ ಬಗ್ಗೆ ಮಣಿಕುಟ್ಟನ್ ಫೇಸ್ ಬುಕ್ ಪೋಸ್ಟ್ ಕೂಡ ಹಾಕಿದ್ದು,  ನನ್ನನ್ನು ತಲೆಕೆಳಗಾಗಿ ನೇಣು ಹಾಕಿದರೂ ನಾನು ನನ್ನ ಜನರಿಗೆ ಮೋಸ ಮಾಡುವುದಿಲ್ಲ ಎಂಬರ್ಥದ ಡಾ.ಬಿ.ಆರ್.ಅಂಬೇಡ್ಕರ್  ಉಕ್ತಿಯನ್ನು ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಎಲ್ಲೆಡೆ ರಾಜಕೀಯ ಪ್ರವೇಶಕ್ಕೆ, ವಿಧಾನಸಭೆ ಟಿಕೇಟ್ ಗಾಗಿ ಹೋರಾಟ-ಹೊಡೆದಾಟಗಳೇ ನಡೆದಿರುವ ಹೊತ್ತಿನಲ್ಲಿ ಕೇರಳದಲ್ಲಿ ಬಿಜೆಪಿಯೇ ನೀಡಿದ ಟಿಕೇಟ್ ನಿರಾಕರಿಸುವ ಮೂಲಕ ಮಣಿಕುಟ್ಟನ್ ಚರ್ಚೆಗೆ ಗ್ರಾಸವಾಗಿದ್ದಾರೆ.

Comments are closed.