ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್ ಆರಂಭ : ಮಂಗಳೂರು, ಉಡುಪಿಯಲ್ಲಿಲ್ಲ ಬಸ್ ಸಂಚಾರ !

0

ಮಂಗಳೂರು/ಉಡುಪಿ : ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿಯಾಗಿದೆ. ಆದರೆ ರಾಜ್ಯ ಸರಕಾರ ಅಂತರ್ಜಿಲ್ಲಾ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚರಿಸುತ್ತಿವೆ. ಆದರೆ ಉಡುಪಿ ಹಾಗೂ ಮಂಗಳೂರಿನಲ್ಲಿ ಬಸ್ ಗಳು ರಸ್ತೆಗೆ ಇಳಿದಿಲ್ಲ. ಇದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಬಾಕಿ ಉಳಿದಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ರಾಯಚೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ.

ಆದರೆ ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ ಕರಾವಳಿಗರು ಇನ್ನೂ ಆತಂಕದಿಂದ ಹೊರಬಂದಿಲ್ಲ. ಕಳೆದ ಹದಿನೈದು ದಿನಗಳಿಂದ ಹಿಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಜನರು ಮಾತ್ರ ಬಸ್ ಹತ್ತೋದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕ ಬಸ್ ಗಳಲ್ಲಿಯೂ ಪ್ರಯಾಣಿಕರಲ್ಲದೇ ಬಣಗುಡುತ್ತಿವೆ.

ಇದೀಗ ರಾಜ್ಯದಾದ್ಯಂತ ಬಸ್ ಸಂಚಾರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಿಂದ ಒಂದು ಬಸ್ಸು ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಆದರೆ ಮಂಗಳೂರು ಡಿಪೋದಲ್ಲಿ ಯಾವುದೇ ಬಸ್ಸುಗಳು ಸಂಚಾರ ನಡೆಸಿಲ್ಲ. ಅದ್ರಲ್ಲೂ ಉಡುಪಿ ಮತ್ತು ಮಂಗಳೂರು ನಡುವೆ ಬಸ್ಸುಗಳ ಸಂಚಾರ ಇಲ್ಲದೇ ಇರೋದ್ರಿಂದಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು ನಿಲ್ದಾಣಗಳಲ್ಲಿಯೇ ಬಾಕಿಯಾಗಿದ್ದಾರೆ.

ಕರಾವಳಿ ಜಿಲ್ಲೆಗಳು ಹೆಚ್ಚಾಗಿ ಖಾಸಗಿ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್ ಸಂಚಾರ ಮಾಡುವುದು ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ತೆರಿಗೆ ವಿನಾಯಿತಿ ನೀಡುವಂತೆ ಬಸ್ ಮಾಲೀಕರು ಸರಕಾರದ ಮುಂದೆ ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘ ಸಪ್ಟೆಂಬರ್ ವರೆಗೂ ಬಸ್ಸುಗಳನ್ನು ರಸ್ತೆ ಇಳಿಸೋದಿಲ್ಲಾ ಎಂದಿದೆ. ಒಂದೊಮ್ಮೆ ಸರಕಾರ ಬಸ್ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡಿದ್ರೆ ಮೇ ಅಂತ್ಯಕ್ಕೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ.

Leave A Reply

Your email address will not be published.