ಗೆಜ್ಜೆಗಿರಿ ವಿವಾದ : ರಾಜ್ಯ ಸರಕಾರದ ಮಧ್ಯಪ್ರವೇಶ ..?

ಮಂಗಳೂರು : ಕೋಟಿ ಚೆನ್ನಯ್ಯರ ಮೂಲಕ್ಷೇತ್ರವಾಗಿರುವ ನಂದನ ಬಿತ್ತಲ್ ಗೆಜ್ಜೆಗಿರಿ ವಿವಾದ ದಿನ ಕಳೆದಂತೆ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಒಂದೆಡೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ರೆ, ಇನ್ನೊಂದೆಡೆ ಆಡಳಿತಕ್ಕಾಗಿ ಕಿತ್ತಾಟ ಶುರುವಾಗಿದೆ. ಈ ನಡುವಲ್ಲೇ ರಾಜ್ಯ ಸರಕಾರ ಮಧ್ಯಪ್ರವೇಶದ ಮಾತು ಕೇಳಿಬರುತ್ತಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪತ್ತೂರಿನಲ್ಲಿರುವ ಗೆಜ್ಜೆಗಿರಿ ಕರಾವಳಿ ಭಾಗದ ಪ್ರಮುಖ ಆರಾಧನಾ ಕೇಂದ್ರ. ತುಳುನಾಡ ವೀರಪುರುಷರಾಗಿರುವ ಕೋಟಿ – ಚೆನ್ನಯ್ಯರು ಹುಟ್ಟಿ ಬೆಳೆದ ಕ್ಷೇತ್ರದಲ್ಲೀಗ ವಿವಾದ ಬುಗಿಲೆದ್ದಿದೆ. ಪುತ್ತೂರಿನ ನ್ಯಾಯಾಲಯದಲ್ಲಿ ಜಾಗದ ಮಾಲೀಕರಾದ ಶ್ರೀಧರ ಪೂಜಾರಿ ಅವರು ಪ್ರಕರಣವೊಂದನ್ನು ದಾಖಲಿಸಿದ್ದು, ಈ ಪ್ರಕರಣದ ಕುರಿತು ಮುಂದಿನ ತಿಂಗಳು ವಿಚಾರಣೆ ನಡೆಯಲಿದೆ. ಈ ನಡುವಲ್ಲೆ ದೇವಸ್ಥಾನದಲ್ಲಿನ ಪೂಜೆ, ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಆಡಳಿತದ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ತೀವ್ರ ಸ್ವರೂಪವನ್ನು ಪಡೆಯುವ ಸಾಧ್ಯತೆ ಯಿದೆ. ಈ ಕುರಿತು ಗೆಜ್ಜೆಗಿರಿಯ ಲಕ್ಷಾಂತರ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನದ ಜಾಗದ ಮಾಲೀಕರು ಹಾಗೂ ಆಡಳಿತ ಮಂಡಳಿಯ ನಡುವೆ ಹುಟ್ಟಿಕೊಂಡಿರುವ ವಿವಾದದಿಂದಾಗಿ ದೇವಸ್ಥಾನದ ಆಡಳಿತ ಹಾಗೂ ಹಣಕಾಸಿನ ಸುಗಮ ವಿನಿಯೋಗಕ್ಕಾಗಿ ರಾಜ್ಯ ಸರಕಾರದ ಮಧ್ಯಪ್ರವೇಶವನ್ನು ತಳ್ಳಿ ಹಾಕುವಂತಿಲ್ಲ. ಅಲ್ಲದೇ ಗೆಜ್ಜೆಗಿರಿ ಕರಾವಳಿ ಭಾಗದಲ್ಲಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಮಾತ್ರವಲ್ಲ ಕ್ಷೇತ್ರಕ್ಕೆ ನಿತ್ಯವೂ ಭಕ್ತರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದೆ.ಈ ನೆಲೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯ ಅನ್ವಯ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡುವುದೇ ಅನ್ನುವ ಕುತೂಹಲ ಸೃಷ್ಟಿಯಾಗಿದೆ.

ಗೆಜ್ಜೆಗಿರಿಯಲ್ಲಿ ಹಣ ದುರುಪಯೋಗವಾಗಿದೆ ಎನ್ನುವ ಆರೋಪ ಕೇಳಿಬರುತ್ತಿದ್ದು, ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ವಿವಿಧ ತೀರ್ಪುಗಳು ಇದೀಗ ಮುನ್ನಲೆಗೆ ಬಂದಿವೆ. ಉತ್ತರ ಪ್ರದೇಶದಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಎನ್. ರಮಣ ಅವರು ಸಾರ್ವಜನಿಕ ರಿಂದ ದೇಣಿಗೆ ಪಡೆಯುವ ಆರಾಧನಾ ಸ್ಥಳಗಳು ಸರಕಾರದ ಕಾನೂನಿನ ನಿಯಂತ್ರಣಕ್ಕೆ ಒಳಡಬೇಕೆಂದು ಆದೇಶಿಸಿರುವುದು ಗೆಜ್ಜೆಗಿರಿಯ ವಿಚಾರದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಅಷ್ಟೇ ಯಾಕೆ ರಾಜ್ಯದ ಪ್ರಮಖ ಪುಣ್ಯಕ್ಷೇತ್ರಗಳಲ್ಲೊಂದಾಗಿರುವ ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ಹಾಗೂ ಅರ್ಚಕರ ನಡುವಿನ ವಿವಾದದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಿತ್ತು. ದೇವಸ್ಥಾನದಲ್ಲಿ ವಿವಾದವೊಂದು ಹುಟ್ಟಿಕೊಂಡು ಅವ್ಯವಹಾರದ ಆರೋಪ ಕೇಳಿಬರುತ್ತಲೇ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಅಲ್ಲದೇ ದೇವಸ್ಥಾನದಲ್ಲಿನ ಪೂಜೆ, ಧಾರ್ಮಿಕ ಕೈಂಕರ್ಯ, ಭಕ್ತರಿಂದ ದೇಣಿಗೆ ಸಂಗ್ರಹ ಸೇರಿದಂತೆ ಭಕ್ತರಿಂದ ದೇವಸ್ಥಾನಕ್ಕೆ ಸಲ್ಲಿಕೆಯಾಗುವ ಹಣದ ಲೆಕ್ಕವಿಡುವಂತೆಯೂ ರಾಜ್ಯ ಸರಕಾರ ಖಡಕ್ ಸೂಚನೆಯನ್ನು ಕೊಟ್ಟಿತ್ತು.

ಇದನ್ನೂ ಓದಿ :

https://kannada.newsnext.live/koti-chennaya-birth-place-gejjegiri-contrvercy-get-puttur-court/

ಇದೀಗ ಗೆಜ್ಜೆಗಿರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮಧ್ಯಪ್ರವೇಶದ ಮಾತುಗಳು ಕೇಳಿಬರುತ್ತಿವೆ. ಕೋಟಿ ಚೆನ್ನಯ್ಯರ ಮೂಲಕ್ಷೇತ್ರವಾಗಿರುವ ಗೆಜ್ಜೆಗಿರಿ ವಿವಾದದಲ್ಲಿ ರಾಜ್ಯ ಸರಕಾರ ಯಾವ ನಿಲುವನ್ನು ವಹಿಸಲಿದೆ ಅನ್ನೋದು ಲಕ್ಷಾಂತರ ಭಕ್ತರಲ್ಲಿ ಕುತೂಹಲವನ್ನು ಮೂಡಿಸಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತ್ರ ಈ ವಿಚಾರದಲ್ಲಿ ಪ್ರತಿಕ್ರೀಯೆ ನೀಡೋದಕ್ಕೆ ಸಂಪರ್ಕಕ್ಕೆ ಸಿಗುತ್ತಿಲ್ಲ.

Comments are closed.