ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ : ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

0

ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕಿನಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜಿ ಸಿಇಓ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿ ಬಳಿಯಲ್ಲಿರುವ ಪೂರ್ಣಪ್ರಜ್ಞಾ ಲೇಔಟ್ ನಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಭೇಟಿಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಬಸವನಗುಡಿಯಲ್ಲಿರುವ ಗುರುರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಸುಮಾರು 1400 ಕೋಟಿ ರೂಪಾಯಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ವಾಸುದೇವ ಮಯ್ಯ ಅವರು ಬ್ಯಾಂಕಿನಲ್ಲಿ ಸಿಇಓ ಆಗಿ ಸೇವೆ ಸಲ್ಲಿಸಿದ್ದಾರೆ. ಅವ್ಯವಹಾರದ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಬ್ಯಾಂಕಿನ ಹಾಗೂ ವಾಸುದೇವ ಮಯ್ಯ ಅವರ ಮನೆಯ ಮೇಲೆ ಎಸಿಬಿ ದಾಳಿಯನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಳೆದಾರು ತಿಂಗಳ ಹಿಂದೆಯೆಷ್ಟೇ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿತ್ತು. ಮಾತ್ರವಲ್ಲ ಭಾರತೀಯ ರಿಸರ್ವ್ ಬ್ಯಾಂಕ್ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು. ಬಸವನಗುಡಿಯ ಶ್ರೀ ಗುರು ರಾಘವೇ‌ದ್ರ ಕೋ ಆಪರೇಟಿವ್​ ಸಹಕಾರ ಬ್ಯಾಂಕಿನ ಅವ್ಯಹಾರ ಪ್ರಕರಣದ ತನಿಖೆಯ ಹೊಣೆಯನ್ನ ಎಸಿಬಿಯಿಂದ ಸಿಐಡಿಗೆ ವಹಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.

ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆದಿರುವ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಲಾಗಿತ್ತು. ಅಲ್ಲದೇ ಪ್ರಕರಣದ ತನಿಖೆಯನ್ನ ಸಿಐಡಿ‌ ನಡೆಸೋದು ಒಳ್ಳೆಯದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪ್ರಕರಣದ ಜವಾಬ್ದಾರಿಯನ್ನ ಸಿಐಡಿಗೆ ತೆಗೆದುಕೊಂಡು ತನಿಖೆ ನಡೆಸುತಿತ್ತು.ಬ್ಯಾಂಕ್ ವಿರುದ್ಧ ಆರೋಪ ಕೇಳಿ ಬಂದಾಗ ಎಸಿಬಿ‌ ಪಿಎಂಎಲ್ ಅಡಿ ಪ್ರಕರಣ ದಾಖಲಾಗಿತ್ತು. ಬಸವನಗುಡಿ ಶಾಖೆಯ ಹಿಂದಿನ ಅಧ್ಯಕ್ಷ ರಾಮಕೃಷ್ಣ, ಮಾಜಿ ಸಿಇಒ ವಾಸುದೇವಯ್ಯ ಅವರ ಮನೆಗಳು ಸೇರಿದಂತೆ ಐದು ಕಡೆ ಎಸಿಬಿ ದಾಳಿ ನಡೆಸಿತ್ತು. ಬ್ಯಾಂಕಿನಲ್ಲಿ ಅಗತ್ಯ ಭದ್ರತೆ ಕೈಗೊಳ್ಳದೇ 27 ಮಂದಿಗೆ 921ಕೋಟಿ ಸಾಲ ನೀಡಿರುವ ಮಾಹಿತಿ ಆರ್ ಬಿ ಐ ಮತ್ತು ಎಸಿಬಿ ತನಿಖೆಯಿಂದ ಬಯಲಾಗಿತ್ತು. ಬ್ಯಾಂಕ್​​ಗೆ ಸಂಬಂಧ ಪಟ್ಟ ಅಧಿಕಾರಿ‌ಗಳ‌ ಮನೆಯಲ್ಲಿ ಅಕ್ರಮ ಆಸ್ತಿ ಕೂಡ ಪತ್ತೆಯಾಗಿತ್ತು ಎನ್ನಲಾಗುತ್ತಿದೆ.

ಗ್ರಾಹಕರಿಗೆ ಅತೀಯಾದ ಬಡ್ಡಿಯ ಆಸೆಯನ್ನು ತೋರಿಸಿ ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕರಿಂದ 2,400 ಕೋಟಿ ರೂಪಾಯಿ ಹಣವನ್ನು ಠೇವಣಿ ಇರಿಸಿಕೊಂಡಿದ್ದಾರೆ. ಈ ಪೈಕಿ ಸುಮಾರು 1,400 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ. 150 ಕೋಟಿ ರೂಪಾಯಿ ಗ್ರಾಹಕರ ಹಣವನ್ನು ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಖಾತೆಗಳಿಗೆ ವರ್ಗಾವಣೆಯನ್ನು ಮಾಡಿಸಿಕೊಂಡಿದ್ದಾರೆ. ಅಲ್ಲದೇ ಬೋಗಸ್ ಖಾತೆಗಳನ್ನು ತೆರೆದು 150 ಕೋಟಿ ರೂಪಾಯಿಯನ್ನು ಸಾಲ ನೀಡಲಾಗಿದೆ.

ಇನ್ನು ರಿಯಲ್ ಎಸ್ಟೇಟ್ ವ್ಯವಹಾರ, ಉದ್ಯಮದ ಹೆಸರಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಸಾಲವನ್ನು ಕಮಿಷನ್ ಆಧಾರದ ಮೇಲೆ ನೀಡಲಾಗಿದೆ. ಆದರೆ ಈ ಹಣ ರಿಕವರಿ ಆಗಿರಲಿಲ್ಲ. ಬ್ಯಾಂಕಿನಲ್ಲಿ ನಡೆಯುತ್ತಿದ್ದ ಆಡಿಟ್ ರಿಪೋರ್ಟ್ ಮೇಲೆ ಕಣ್ಣಿಟ್ಟಿದ್ದ ರಿಸರ್ವ್ ಬ್ಯಾಂಕ್, ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ವ್ಯವಹಾರದ ಮೇಲೆ ನಿರ್ಬಂಧವನ್ನು ಹೇರಿತ್ತು. ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಾಗಿದ್ದು, ಇದೇ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.