ಲಾಜಿಸ್ಟಿಕ್ ವ್ಯವಹಾರ ಕೊಡಿಸುವುದಾಗಿ ನಂಬಿಸಿ ಮಹಾಮೋಸ : ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿ 3 ಜನರ ಬಂಧನ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಹಾಗೂ ಆತನ ಇಬ್ಬರು ಸಹಚರರನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಖಾಸಗಿ ಬ್ಯಾಂಕಿನ ಹೆಸರಘಟ್ಟ ಶಾಖೆಯ ಮ್ಯಾನೇಜರ್ ವಿನೋದ್‌ಕುಮಾರ್ ಹಾಗೂ ಆತನಿಗೆ ಸಾಥ್ ನೀಡಿದ ಅರುಣ್ ಮತ್ತು ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ.

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಲಾಜಿಸ್ಟಿಕ್ ವ್ಯವಹಾರ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 2.66 ಕೋಟಿ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಹಾಗೂ ಆತನ ಇಬ್ಬರು ಸಹಚರರನ್ನು ಬಾಗಲಗುಂಟೆ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಖಾಸಗಿ ಬ್ಯಾಂಕಿನ ಹೆಸರಘಟ್ಟ ಶಾಖೆಯ ಮ್ಯಾನೇಜರ್ ವಿನೋದ್‌ಕುಮಾರ್ ಹಾಗೂ ಆತನಿಗೆ ಸಾಥ್ ನೀಡಿದ ಅರುಣ್ ಮತ್ತು ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ.
ದೂರುದಾರರಾದ ಸುಬ್ರಮಣ್ಯ ಅವರು ಲಾಜಿಸ್ಟಿಕ್ ಮತ್ತು ಮ್ಯಾನ್‌ಪವರ್ ಸರ್ವಿಸಸ್ ಕಂಪನಿಯನ್ನು ನಡೆಸುತ್ತಿದ್ದು, ತಮ್ಮ ವ್ಯವಹಾರದ ಖಾತೆಯನ್ನು ಹೆಸರಘಟ್ಟದ ಖಾಸಗಿ ಬ್ಯಾಂಕಿನಲ್ಲಿ ಹೊಂದಿದ್ದರು. ಬ್ಯಾಂಕಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಸುಬ್ರಮಣ್ಯ ಅವರ ಪರಿಚಯ ಮಾಡಿಕೊಂಡಿದ್ದ ಮ್ಯಾನೇಜರ್ ವಿನೋದ್, ಉದ್ಯಮಿಯ ಆರ್ಥಿಕ ಸ್ಥಿತಿಗತಿಯ ಸಂಪೂರ್ಣ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದನು. ಉದ್ಯಮಿಯ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ ಈತ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಹುಲ್ ಎಂಬ ನಕಲಿ ಹೆಸರಿನಲ್ಲಿ ಕರೆ ಮಾಡಿದ್ದನು. ತನ್ನ ಧ್ವನಿಯನ್ನು ಸಂಪೂರ್ಣವಾಗಿ ಬದಲಾಯಿಸಿ ಮಾತನಾಡಿದ್ದ ವಿನೋದ್, ಕಂಪನಿಗೆ ಒಂದು ವರ್ಷದ ಅವಧಿಗೆ ಒಟ್ಟು 30 ಕೋಟಿ ರೂಪಾಯಿ ಮೌಲ್ಯದ ಬೃಹತ್ ಲಾಜಿಸ್ಟಿಕ್ ವ್ಯವಹಾರವನ್ನು ಕೊಡಿಸುವುದಾಗಿ ಆಮಿಷ ಒಡ್ಡಿದ್ದನು.
ಈ ದೊಡ್ಡ ಯೋಜನೆಗೆ ಮುಂಗಡವಾಗಿ ಶೇಕಡಾ 10 ರಷ್ಟು ಕಮಿಷನ್ ನೀಡಬೇಕೆಂದು ಆರೋಪಿಗಳು ಬೇಡಿಕೆ ಇಟ್ಟಿದ್ದರು. ಇದನ್ನು ನಿಜವೆಂದೇ ನಂಬಿದ ಉದ್ಯಮಿ ಸುಬ್ರಮಣ್ಯ ಅವರು ಕಳೆದ ಫೆಬ್ರವರಿಯಲ್ಲಿ ಆನ್‌ಲೈನ್ ಬ್ಯಾಂಕಿಂಗ್ RTGS ಮೂಲಕ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ 2.66 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದರು. ಆದರೆ ಹಣ ಕೈ ಸೇರಿದ ನಂತರ ಆರೋಪಿಗಳು ವ್ಯವಹಾರ ಕೊಡಿಸದೆ ನಾನಾ ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡ ತೊಡಗಿದರು. ಇದರಿಂದ ತೀವ್ರ ಅನುಮಾನಗೊಂಡ ಸುಬ್ರಮಣ್ಯ ಅವರು ಆಳವಾಗಿ ಪರಿಶೀಲಿಸಿದಾಗ, ತಮಗೆ ಪರಿಚಿತನಾಗಿದ್ದ ಬ್ಯಾಂಕ್ ಮ್ಯಾನೇಜರ್ ವಿನೋದ್ ಅವರೇ ರಾಹುಲ್ ಸೋಗಿನಲ್ಲಿ ಕರೆ ಮಾಡಿ ವಂಚಿಸಿರುವುದು ಬಹಿರಂಗವಾಗಿದೆ. ಹಣ ಕಳೆದುಕೊಂಡು ಕಂಗಾಲಾದ ಉದ್ಯಮಿ ತಕ್ಷಣವೇ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಜೂನ್ 25 ರವರೆಗೆ ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


