ಕೇಂದ್ರ ರೈಲ್ವೆ ಖಾತೆಯ ಸಚಿವ ಸುರೇಶ್ ಅಂಗಡಿ ಕೊರೊನಾಗೆ ಬಲಿ

0

ನವದೆಹಲಿ : ಕೊರೊನಾ ವೈರಸ್ ಸೋಂಕಿಗೆ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಬಲಿಯಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದಲೂ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅಂಗಡಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಸುರೇಶ್ ಅಂಗಡಿ ಅವರು ಕಳೆದ ಕೆಲ ದಿನಗಳಿಂದಲೂ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದ್ರೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿರುವ ಸುರೇಶ್ ಅಂಗಡಿ ಅವರ ನಿಧನ ಇದೀಗ ಬಿಜೆಪಿ ಪಾಳಯಕ್ಕೆ ಆಘಾತವನ್ನು ತಂದಿದೆ. 2004, 2009, 2014 ಹಾಗೂ 2019ರಲ್ಲಿ ಸತತ ಬಾರಿಗೆ ಬೆಳಗಾವಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಸುರೇಶ್ ಅಂಗಡಿ ಅವರು ಕೇಂದ್ರ ಸಚಿವರಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದರು. ರಾಜ್ಯಕ್ಕೆ ಹಲವು ರೈಲ್ವೆ ಯೋಜನೆಯನ್ನು ಮಂಜೂರು ಮಾಡಿಸಿಕೊಡುವಲ್ಲಿಯೂ ಮಹತ್ವದ ಪಾತ್ರವವನ್ನು ವಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕೆ.ಕೆ. ಕೊಪ್ಪಲ್ಲಿ 1955ರಲ್ಲಿ ಚನ್ನಬಸಪ್ಪ ಅಂಗಡಿ ಹಾಗೂ ಸೋಮವ್ವ ದಂಪತಿಗಳ ಮಗನಾಗಿ ಜನಿಸಿದ ಸುರೇಶ್ ಅಂಗಡಿ ಎಸ್ಎಸ್ಎಸ್ ಸಮಿತಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ರಾಜ ಲಕ್ಷಣಗೌಡ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ. ರಾಜ್ಯ ಬಿಜೆಪಿಯ ಪ್ರಭಾವಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಮಂಗಳ ಅಂಗಡಿ ಅವರನ್ನು ವಿವಾಹವಾಗಿದ್ದ ಸುರೇಶ್ ಅಂಗಡಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಂಸದ ಸುರೇಶ್ ಅಂಗಡಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.