ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಪ್ರಕರಣ : ಆರೋಪಿಗಳ ಜೊತೆ ಕೈಜೋಡಿಸಿದ ಎಸಿಪಿ ಎಂ.ಆರ್.ಮುಧವಿ ಅಮಾನತು

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದ್ರೀಗ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಈ ಮಧ್ಯೆ ತಮ್ಮದೇ ಇಲಾಖೆಯಲ್ಲಿ ಇದ್ದುಕೊಂಡು ಎಸಿಪಿ ಮುಧವಿ ತನಿಖೆಯ ಮಾಹಿತಿಯನ್ನು ಆರೋಪಿಗಳ ಜೊತೆಗೆ ಹಂಚಿಕೆ ಮಾಡಿರೋ ಸತ್ಯ ವಿಚಾರಣೆ ವೇಳೆ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಎಸಿಪಿ ಹಾಗೂ ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಅಮಾನತ್ತು ಮಾಡಲಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಜೊತೆಗೆ ಹಲವು ಮಂದಿ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಹಲವು ಮಂದಿ ನಟ, ನಟಿಯರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜಕಾರಣಿಗಳ ಮಕ್ಕಳ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಳ್ಳುತ್ತಿದೆ. ಈ ನಡುವಲ್ಲೇ ಆರೋಪಿಗಳ ಜೊತೆಗೆ ಎಸಿಪಿ ಮುಧವಿ ನಿಂತಿರುವುದು ಸಿಸಿಬಿ ಅಧಿಕಾರಿಗಳ ತನಿಖೆ ಹಿನ್ನಡೆಯಾಗಿದೆ.

ಆರೋಪಿಗಳ ಬೆನ್ನಿಗೆ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ಸಿಸಿಬಿ ಪೊಲೀಸರು ತನಿಖೆಯ ವೇಳೆ ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಪಿ.ಎಂ.ಆರ್. ಮುಧವಿಯನ್ನು ಸಸ್ಪೆಂಡ್ ಮಾಡಲಾಗಿದೆ. ಜೊತೆಗೆ ಅವರಿಗೆ ಸಹ ಕರಿಸಿದ್ದ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ್ ಕೂಡ ಅಮಾನತು ಮಾಡಿ ಆದೇಶಿಸಲಾಗಿದೆ.

ಇಷ್ಟೇ ಅಲ್ಲಾ ಡ್ರಗ್ಸ್ ಪ್ರಕರಣದ ಆರೋಪಿಗಳಾದಂತ ವಿರೇನ್ ಖನ್ನಾ, ಶೇಖ್ ಫಾಜಿಲ್ ಜೊತೆಗೆ ಎಸಿಪಿ ಮುಧುವಿ ತನಿಖೆಯ ಮಾಹಿತಿ ಹಂಚಿಕೊಂಡು 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಅಮಾನತು ಗೊಳಿಸುವಂತೆ ಪೊಲೀಸ್ ಆಯುಕ್ತರಿಗೆ ಸಿಸಿಬಿ ಮುಖ್ಯಸ್ಥರು ತನಿಖಾ ವರದಿಯನ್ನು ಸಲ್ಲಿಸಿದ್ದರು.

ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೀಡಿದ್ದ ವರದಿಯನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು..ಈ ವರದಿ ಆಧರಿಸಿ ಇಲಾಖಾ ತನಿಖೆ ಜೊತೆಗೆ ಎಸಿಪಿ ಎಂ.ಆರ್. ಮುಧವಿಯನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

Leave A Reply

Your email address will not be published.