ಎನ್ ಪಿಎಸ್ ರದ್ದು : ಮುಖ್ಯಮಂತ್ರಿಗಳಿಗೆ ಪತ್ರಬರೆದ ಸಚಿವ ಪ್ರಭು ಚವ್ಹಾಣ್

ಬೆಂಗಳೂರು : ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಏಕರೂಪದ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚೌವ್ಹಾಣ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿದ್ದಾರೆ.

2006ರ ಎಪ್ರಿಲ್ 1 ರಿಂದ ರಾಜ್ಯದಲ್ಲಿ ಸರಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಒಟ್ಟು 7,41,048 ಮಂದಿ ಸರಕಾರಿ ನೌಕರರಿದ್ದು, 2,28,527 ನೌಕರರು ನೂತನ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸಿಲ್ಲ, ಅದು ಆಯಾಯ ರಾಜ್ಯಗಳ ವಿವೇಚನೆಗೆ ಬಿಟ್ಟಿದೆ.

ಎನ್ ಪಿಎಸ್ ರದ್ದುಗೊಳಿಸಿ ಎಲ್ಲಾ ನೌಕರರಿಗೂ ಏಕರೂಪದ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರಿ ನೌಕರರು ಹಲವಾರು ಹೋರಾಟಗಳನ್ನು ನಡೆಸಿದ್ದಾರೆ. ಮಾತ್ರವಲ್ಲ ತಾವು ಕೂಡ ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಭರವಸೆಯನ್ನು ನೀಡಿದ್ದೀರಿ.

ಸರಕಾರಿ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ಹಳೆದ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವರದಿಯನ್ನು ನೀಡಲು ಅಧಿಕಾರಿಗಳ ಸಮಿತಿಯನ್ನು ಈ ಹಿಂದಿನ ಸರಕಾರ ನೇಮಕ ಮಾಡಿತ್ತು. ಆದರೆ ಸಮಿತಿಯು ಒಂದು ಸಭೆಯನ್ನು ನಡೆಸಿದ್ದನ್ನು ಬಿಟ್ಟರೆ ಯಾವುದೇ ಪ್ರಗತಿಯಾಗಿಲ್ಲ.

ಈ ನಿಟ್ಟಿನಲ್ಲಿ ಭಾರತ ಸಂವಿಧಾನದ 131ನೇ ಪರಿಚ್ಚೇದದ ಆಶಯದಂತೆ ಹೊರಡಿಸಿರುವ ಸರಕಾರಿ ಆದೇಶದನ್ವಯ ಅಧಿಕಾರಿಗಳ ಸಮಿತಿಯಿಂದ ಮೂರು ತಿಂಗಳ ಒಳಗಾಗಿ ವರದಿಯನ್ನು ಪಡೆದು ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ ಕೊಟ್ಟಿರುವ ಭರವಸೆಯನ್ನು ಮುಖ್ಯಮಂತ್ರಿಗಳಾಗಿ ಈಡೇರಿಸುವುದರ ಮೂಲಕ 2.28 ಲಕ್ಷ ನೂತನ ಪಿಂಚಣಿ ಯೋಜನೆ ವ್ಯಾಪ್ತಿಯ ನೌಕರರ ಕುಟುಂಬಗಳಿಗೆ ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Comments are closed.