ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ….! ಮಹಾದುರಂತ ತಪ್ಪಿಸಿ 18 ಜನಜೀವ ಕಾಪಾಡಿದ ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ್…!!

ಬೆಂಗಳೂರು: ಆ ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ರೋಗಿಗಳು ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಮಧ್ಯರಾತ್ರಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಒಬ್ಬರೋಗಿ ಆಗಲೇ ಸಾವಿನ ಮನೆ ಸೇರಿದ್ದರು. ಆಕ್ಸಿಜನ್ ಗಾಗಿ ಪ್ರಯತ್ನಿಸಿ ಸೋತ ಆಸ್ಪತ್ರೆ ಸಿಬ್ಬಂದಿ ಎಲ್ಲೂ ಆಕ್ಸಿಜನ್ ಸಿಗದೇ ಹೋದಾಗ  ಕೊನೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮೊರೆ ಹೋದರು. ರೋಗಿಗಳ ಜೀವಕಾಪಾಡಲು ಸನ್ನದ್ಧರಾದ ಇನ್ಸಪೆಕ್ಟರ್ ಕೊನೆಗೂ ಬಾಲಿವುಡ್ ನಟನ ನೆರವಿನಿಂದ 18 ಜನರ ಪ್ರಾಣ ಕಾಪಾಡಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನ ಯಲಹಂಕದ ಆರ್ಕಾ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿತ್ತು. ಎಲ್ಲೆಡೆ ಪ್ರಯತ್ನಿಸಿದರೂ ಆಸ್ಪತ್ರೆ ಸಿಬ್ಬಂದಿಗೆ ಆಕ್ಸಿಜನ್ ಸಿಲಿಂಡರ್ ಸಿಕ್ಕಿರಲಿಲ್ಲ. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಯಲಹಂಕ ಪೊಲೀಸ್ ಇನ್ಸಪೆಕ್ಟರ್ ಕೆ.ಪಿ.ಸತ್ಯನಾರಾಯಣ ಅವರನ್ನು  ಸಂಪರ್ಕಿಸಿದ್ದಾರೆ. ತಕ್ಷಣ ರೋಗಿಗಳ ಪ್ರಾಣ ಕಾಪಾಡಲು ಕಾರ್ಯಪ್ರವೃತ್ತರಾದ ಸತ್ಯನಾರಾಯಣ, ಹಲವು ಕಡೆ ಪ್ರಯತ್ನಿಸಿದ್ದಾರೆ. ಆದರೆ ಸಿಲಿಂಡರ್ ಸಿಗಲಿಲ್ಲ.

ಕೊನೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವಾರ್ ರೂಂ ಮೂಲಕ ಸೋನುಸೂದ್ ಟ್ರಸ್ಟ್ ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ ಮೂರು ತಾಸಿನಲ್ಲಿ 15 ಆಕ್ಸಿಜನ್ ಸಿಲೆಂಡರ್ ತರಿಸಿ ಅರ್ಕಾ ಆಸ್ಪತ್ರೆಗೆ ಪೊರೈಸಿ ಬರೋಬ್ಬರಿ 18 ಜನರ ಪ್ರಾಣ ಕಾಪಾಡಿದ್ದಾರೆ.

ಸ್ವಯಂಪ್ರಯತ್ನದಿಂದ ಹಲವೆಡೆ ಪ್ರಯತ್ನಿಸಿ ಆಕ್ಸಿಜನ್ ಸಿಲಿಂಡರ್ ಒದಗಿಸಿ ರೋಗಿಗಳ ಪ್ರಾಣ ಕಾಪಾಡಿದ ಸತ್ಯನಾರಾಯಣ ಅವರ  ಕಾರ್ಯಕ್ಕೆ ಇದೀಗ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ಹಿಂದೆಯೂ ಹಲವಾರು ಭಾರಿ ಜನರಿಗೆ ನೆರವಾಗಿರುವ ಇನ್ಸಪೆಕ್ಟರ್ ಸತ್ಯನಾರಾಯಣ ಪೊಲೀಸ್ ಇಲಾಖೆಯಲ್ಲೇ ತಮ್ಮ ದಕ್ಷತೆ,ಪ್ರಾಮಾಣಿಕತೆಯಿಂದ ಹೆಸರು ಗಳಿಸಿದ್ದಾರೆ.

ಕೊರೋನಾ ಮೊದಲ ಅಲೆಯಲ್ಲಿ ಲಾಕ್ ಡೌನ್ ಜಾರಿಯಾದಾಗ ಬೆಂಗಳೂರು-ತುಮಕೂರು ರಸ್ತೆಯ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಬಳಿ ಸಾವಿರಾರು ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸುವುದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ವಿಕೋಪಕ್ಕೆ ತೆರಳಿ ಕಾರ್ಮಿಕರು ಹಲ್ಲೆಗೂ ಮುಂದಾಗಿದ್ದರು. ಈ ವೇಳೆ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದ ಸತ್ಯನಾರಾಯಣ ರಾಷ್ಟ್ರಗೀತೆ ಹಾಡುವ ಮೂಲಕ ಪರಿಸ್ಥಿತಿ ನಿಯಂತ್ರಿಸಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ ಕಾರ್ಮಿಕರಿಗೂ ತಮ್ಮ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಿದ್ದರು.

ನಿನ್ನೆ ಯಲಹಂಕ ಇನ್ಸಪೆಕ್ಟರ್  ಸತ್ಯನಾರಾಯಣ ಸಮಯಕ್ಕೆ ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ, ಚಾಮರಾಜನಗರದಲ್ಲಿ ನಡೆದ ದುರಂತ ನಗರದಲ್ಲೂ ನಡೆದು 18 ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೀಗಾಗಿ ತಮ್ಮ ಕರ್ತವ್ಯದ ವೇಳೆ ಸಮಯಪ್ರಜ್ಞೆ ಮೆರೆದು ಜನರ ಪ್ರಾಣ ಕಾಪಾಡಿದ ಕೆ.ಪಿ.ಸತ್ಯನಾರಾಯಣಗೆ ನಿಜಕ್ಕೂ ತಲೆಬಾಗಿ ಸಲಾಂ ಹೇಳಲೇ ಬೇಕು.

ಕೇವಲ ಖಡಕ್ ಖಾಕಿ ಅಧಿಕಾರಿ ಮಾತ್ರವಲ್ಲದೇ ಉತ್ತಮ ಸಾಹಿತ್ಯಪ್ರೇಮಿ, ಬರಹಗಾರ ಹಾಗೂ ವೈಲ್ಡ್ ಲೈಫ್ ಪೋಟೋಗ್ರಾಫರ್ ಕೂಡ ಆಗಿರುವ ಇನ್ಸಪೆಕ್ಟರ್ ಸತ್ಯನಾರಾಯಣ್, ಲೋಕಾಯುಕ್ತ,ಸಿಸಿ ಬಿ ಸೇರಿದಂತೆ ನಗರ ಪೊಲೀಸ್ ಇಲಾಖೆಯ ಹಲವು ವಿಭಾಗದಲ್ಲಿ ಕೆಲಸ ನಿರ್ವಹಿಸಿ ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಪತ್ತೆಹಚ್ಚಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.  

Comments are closed.