ಬ್ರೇಕ್ ಬಳಿಕ ಕೆಜಿಎಫ್ ಸೆಟ್ ಗೆ ಮರಳಿದ ಯಶ್…! ಪೋಟೋ ಜೊತೆ ಹಂಚಿಕೊಂಡ್ರು ಸಿಹಿಸುದ್ದಿ…!!

0

ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ಯಾವ ಸಿಹಿ ಸುದ್ದಿ ಅಂದ್ರಾ…ಯಶ್  ಅವರ ಬಹುನೀರಿಕ್ಷಿತ ಚಿತ್ರ ಕೆಜಿಎಫ್-2 ಸೆಟ್ ಗೆ ಮರಳಿದ್ದಾರೆ. ಲಾಕ್ ಡೌನ್,ಕೊರೋನಾದ ದೊಡ್ಡ ಬ್ರೇಕ್ ಬಳಿಕ ಯಶ್ ಚಿತ್ರೀಕರಣಕ್ಕೆ ಮರಳಿದ್ದು,  ಸುಂದರವಾದ ಪೋಟೋ ಜೊತೆ ಈ ವಿಚಾರವನ್ನು ಯಶ್ ಹಂಚಿಕೊಂಡಿದ್ದಾರೆ.

ಸಧ್ಯ ಕೃಷ್ಣನಗರಿ ಉಡುಪಿಯಲ್ಲಿ ಕೆಜಿಎಫ್ ಶೂಟಿಂಗ್ ಗಾಗಿ ಸೆಟ್ ಹಾಕಲಾಗಿದ್ದು, ನಾಯಕಿ ಶ್ರೀನಿಧಿ ಶೆಟ್ಟಿ ಜೊತೆ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.  ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಯಶ್ ಕೆಜಿಎಫ್-2 ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಚಿತ್ರೀಕರಣ ದೀರ್ಘಕಾಲ ಸ್ಥಗಿತಗೊಂಡಿತ್ತು.

ಈಗ ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಯಶ್ ಶೂಟಿಂಗ್ ಗೆ ಹಾಜರಾಗಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ತುಸು ಭಾವುಕರಾದಂತೆ ಕಂಡು ಬಂದಿರೋ ಯಶ್ ಹೃದಯಸ್ಪರ್ಶಿ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಕೋಡಿಬೇಂಗ್ರೆ ಬೀಚ್ ನಲ್ಲಿ ಅಲೆಗಳಿಗೆ ಮುಖಮಾಡಿ ನಿಂತು ಮೌನವಾಗಿ ಏನನ್ನೋ ದಿಟ್ಟಿಸುತ್ತಿರುವಂತೆ ಪೋಸ್ ನೀಡಿರುವ ಯಶ್, ಅಲೆಗಳನ್ನು ನಿಲ್ಲಿಸೋದು ಅಸಾಧ್ಯ. ಆದರೆ ನೀವು ಅಲೆಗಳ ಜೊತೆ ಸಾಗಬಹುದು.  ಸಾಗುವುದನ್ನು ಕಲಿಯಬಹುದು. ದೀರ್ಘವಾದ ಬ್ರೇಕ್ ನ ನಂತರ ನಿಮ್ಮ ರಾಕಿ ಇಂದಿನಿಂದ ಮುಂದೆ ಸಾಗ್ತಿದ್ದಾನೆ ಎಂದು ಇಂಗ್ಲೀಷ್ ನಲ್ಲಿ ಬರೆದುಕೊಂಡಿದ್ದಾರೆ.

ಕೊರೋನಾ ಬ್ರೇಕ್ ನಲ್ಲಿ ಮಗ ಮತ್ತು ಮಗಳೊಂದಿಗೆ ಮನೆಯಲ್ಲೇ ಕಾಲ ಕಳೆದ ಯಶ್ ಒಂದೊಂದೆ ಪೋಟೋ,ವಿಡಿಯೋ ಮೂಲಕ ತಾವು ಪೆರೇಂಟ್ ಲೈಫ್ ಎಂಜಾಯ್ ಮಾಡ್ತಿರೋದನ್ನು ಹಂಚಿಕೊಳ್ತಿದ್ದರು . ಇದೀಗ ಶೂಟಿಂಗ್ ಗೆ ಮರಳಿದ್ದು, ಸಧ್ಯದಲ್ಲೇ ಕೆಜಿಎಫ್-2 ತೆರೆ ಮೇಲೆ ದಾಖಲೆ ಮಾಡಲು ಬರುವ ಮುನ್ಸೂಚನೆ ಸಿಕ್ಕಿದೆ.

Leave A Reply

Your email address will not be published.