ತಂಗಿ ಗಂಡನಿಗಾಗಿ ಸ್ಯಾಂಡಲ್ ವುಡ್ ಗೆ ಬಂದ ನೀಲ್….! ಕೆಜಿಎಫ್ ನಿರ್ದೇಶಕನ ಕನ್ನಡ ನಂಟಿನ ಹಿಂದಿದೆ ಇಂಟ್ರಸ್ಟಿಂಗ್ ಸ್ಟೋರಿ..!!

ಭಾರತದ ಸಿನಿರಂಗವೇ ಸ್ಯಾಂಡಲ್ ವುಡ್ ನ್ನು ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅಸಲಿಗೆ ಕನ್ನಡ ಸಿನಿಮಾ ನೋಡಿದವರೇ ಅಲ್ಲ. ಹೌದು ನಿಮಗೆ ಅಚ್ಚರಿ ಎನ್ನಿಸಿದರೂ  ಸತ್ಯ. ಕನ್ನಡದ ಓಂ ಮತ್ತು ನಂಜುಂಡಿ ಕಲ್ಯಾಣ ಬಿಟ್ಟು ಬೇರೆ ಸಿನಿಮಾ ನೋಡಿರದ ನೀಲ್, ಈಗ ಪ್ರಪಂಚದ ಸಿನಿಪ್ರಿಯರೆಲ್ಲ ಕನ್ನಡ ಚಿತ್ರದತ್ತ ಮುಖಮಾಡುವಂತೆ ಮಾಡಿದ್ದಾರೆ.

ಮೂಲತಃ ಕರ್ನಾಟಕದ ಹಾಸನದವರಾದ ಪ್ರಶಾಂತ್ ನೀಲ್  ಎಂಬಿಎ ಪದವಿ ಪಡೆದಿದ್ದಾರೆ. ಸಿನಿಮಾ ರಂಗದಲ್ಲಿ ಆಸಕ್ತಿ ಇದ್ದರೂ ಕನ್ನಡ ಸಿನಿಮಾದ ಬಳಕೆ ಇರಲಿಲ್ಲ. ಇವರ ಸಹೋದರಿ ವಿದ್ಯಾರನ್ನು ಕನ್ನಡದ ನಟ ಶ್ರೀಮುರುಳಿ ಪ್ರೀತಿಸಿ ವಿವಾಹವಾದರು. ಬಳಿಕ ಭಾವನ ಜೊತೆ ಒಡನಾಟ ಹೆಚ್ಚುತ್ತಲೇ ಕನ್ನಡ ಸಿನಿಮಾದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನೀಲ್ ಭಾವನಿಗಾಗಿ ಸಿನಿಮಾ ನಿರ್ದೇಶನದ ಕನಸು ಕಟ್ಟುತ್ತಾರೆ.

ಅದಕ್ಕೂ ಮೊದಲು ನಿರ್ದೇಶನದ ತರಬೇತಿ ಪಡೆದ ನೀಲ್,  ಭಾವನಿಗಾಗಿ ರೋಮ್ಯಾಂಟಿಕ್ ಕಥಾಹಂದರವೊಂದನ್ನು ಹುಡುಕಿ ನಿರ್ಮಿಸಲು ಮುಂದಾಗುತ್ತಾರೆ. ನೀನೆ ಆ ಹುಡುಗಿ ಎಂಬ ಟೈಟಲ್ ನಲ್ಲಿ ಸಿನಿಮಾಗೆ ಸಿದ್ಧತೆ ನಡೆಸಿದ್ದರೂ ಬಳಿಕ ಅದನ್ನು ಕೈಬಿಟ್ಟು ಶ್ರೀಮುರುಳಿಗೆ ಬ್ರೇಕ್ ಸಿಗುವಂತ ಚಿತ್ರವೊಂದನ್ನು ನಿರ್ಮಿಸಲು ಸಿದ್ಧತೆ ನಡೆಸುತ್ತಾರೆ.

ಹೀಗೆ ಭಾವನಿಗಾಗಿ ಸುಂದರ ಕತೆಯೊಂದನ್ನು ಹುಡುಕಿ ಹೊರಟ ನೀಲ್, 2010 ರಲ್ಲಿ ಉಗ್ರಂ ಸಿನಿಮಾ ನಿರ್ದೇಶಿಸಿ ಶ್ರೀಮುರುಳಿ ಗೊಂದು ಹೊಸ ಇಮೇಜ್ ತಂದುಕೊಡುತ್ತಾರೆ. ಇದಕ್ಕಾಗಿ ನೀಲ್, ಸಾಕಷ್ಟು ಶ್ರಮಿಸಿದ್ದು, ಭಾರತದ ಟಾಪ್ ಮೋಸ್ಟ್ ತಂತ್ರಜ್ಞರನ್ನು ಬಳಸಿಕೊಂಡು ಈ ಸಿನಿಮಾ ಸಿದ್ಧಪಡಿಸುತ್ತಾರೆ. ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಸಮಸ್ಯೆಗಾಗಿ ಬಾಕ್ಸ್ ನಲ್ಲೇ ಉಳಿದಿದ್ದ ಸಿನಿಮಾ 2014 ರಲ್ಲಿ ತೆರೆಕಂಡಿದೆ.

2014 ರಲ್ಲಿ ರಿಲೀಸ್ ಆದ ಉಗ್ರಂ ಪ್ರಶಾಂತ್ ನೀಲ್ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದು, ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ನೀಲ್ ಸ್ಯಾಂಡಲ್ ವುಡ್ ಹುಬ್ಬೇರಿಸುವಂತೆ ಮಾಡಿದರು. ಬಳಿಕ ಸಾಕಷ್ಟು ಚಿತ್ರಗಳಿಗೆ ಆಫರ್ ಬಂದರೂ ಪ್ರಶಾಂತ್ ನೀಲ್ 80 ದಶಕದ ಕತೆಯೊಂದನ್ನು ಆಯ್ದುಕೊಂಡು ನಿರ್ಮಿಸಲು ಚಿಂತನೆ ನಡೆಸಿದ್ದರು.

ನೀಲ್ 80 ದಶಕದ ಕತೆಯೊಂದನ್ನು ಸಿನಿಮಾ ಮಾಡಲು ಹೊರಟಿದ್ದೇ ಸಿನಿಇಂಡಸ್ಟ್ರಿಯ ದಾಖಲೆಯ ಸಿನಿಮಾ ಕೆಜಿಎಫ್ ಸೃಷ್ಟಿಗೆ ಕಾರಣವಾಯಿತು. ಹೊಂಬಾಳೆ ಫಿಲ್ಮಂ ಜೊತೆ ಸೇರಿ ನೀಲ್ ಐದು ಭಾಷೆಯಲ್ಲಿ ನಿರ್ಮಿಸಿದ ಚಿತ್ರ ಪ್ರಪಂಚದ ಸಿನಿಪ್ರಿಯರನ್ನು ಸೆಳೆದಿದ್ದು, ಕೆಜಿಎಫ್-2 ಟೀಸರ್ ರಿಲೀಸ್ ಆದ ಕೆಲವೇ ದಿನದಲ್ಲಿ 125 ಮಿಲಿಯನ್ ವೀಕ್ಷಣೆ ಪಡೆದು ವಿಶ್ವದಾಖಲೆ ಬರೆದಿದೆ.

ಉಗ್ರಂಗಾಗಿ ಬೆಸ್ಟ್ ಡೆಬ್ಯೂ ಡೈರೈಕ್ಟರ್ ಅವಾರ್ಡ್ ಪಡೆದ ಪ್ರಶಾಂತ್ ನೀಲ್ ಈಗ ಭಾರತದ ಬಹುಬೇಡಿಕೆಯ ನಿರ್ದೇಶಕ ಎನ್ನಿಸಿಕೊಂಡಿದ್ದು, ಸ್ಟಾರ್ ನಟರು ನೀಲ್ ಜೊತೆ ಸಿನಿಮಾ ನಿರ್ಮಾಣಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಸಧ್ಯಕ್ಕೆ ನೀಲ್ ಸಖತ್ ಬ್ಯುಸಿಯಾಗಿದ್ದು, ಪ್ರಭಾಸ್ ಜೊತೆ ಸಲಾರ್ ನಿರ್ದೇಶನಕ್ಕೆ ಮುಂದಾಗಿದ್ದಾರೆ.

Comments are closed.