ಬಾರದಲೋಕಕ್ಕೆ ಪಯಣಿಸಿದ ಹಿರಿಯಪತ್ರಕರ್ತೆ, ಸಾಹಿತಿ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ

0

ಮಂಗಳೂರು : ಸಾಹಿತಿ, ವಿಜಯಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ ಸೀತಾಲಕ್ಷ್ಮೀ ಕರ್ಕಿಕೋಡಿ (44 ವರ್ಷ) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾರದಲೋಕಕ್ಕೆ ಪಯಣಿಸಿದ್ದಾರೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಕೋಡಿಯ ನಿವಾಸಿ. ಹಿರಿಯ ಸಾಹಿತಿ ವಿ.ಗ.ನಾಯಕ ಮತ್ತು ಶ್ಯಾಮಲ ಕರ್ಕಿಕೋಡಿ ಅವರ ಪುತ್ರಿ. ಕಳೆದ 19 ವರ್ಷಗಳಿಂದಲೂ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ್ತಿಯಾಗಿ, ಹಿರಿಯ ಉಪಸಂಪಾದಕಿಯಾಗಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಡ್ಯನಡ್ಕದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದ್ದ ಸೀತಾಲಕ್ಷ್ಮೀ ಕರ್ಕಿಕೋಡಿ ಅವರು, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ‘ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ’ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬಯಿ ವಿವಿ ಪಿಎಚ್‌ಡಿ ಪದವಿ ಪ್ರದಾನಿಸಿ ಗೌರವಿಸಿದೆ.

ಪರ್ತಕರ್ತರಾಗಿರುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡಿದವರು ಸೀತಾಲಕ್ಷ್ಮೀ ಕರ್ಕಿಕೋಡಿ. ಸಾಹಿತ್ಯ ಲೋಕಕ್ಕೆ ತನ್ನದೇ ಆದ ಸೇವೆ ನೀಡಿದ ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ಪರಾಮರ್ಶೆ, ಮುಕ್ತಮಾತು, ಆ ಕ್ಷಣದಲ್ಲಿ, ರಂಗಕರ್ಮಿ ಸದಾನಂದ ಸುವರ್ಣ ಸಂಪದ, ರಂಗಚೇತನ ಸದಾನಂದ ಸುವರ್ಣ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ವಿ. ಅರ್ತಿಕಜೆ ಮುಂತಾದ ಹತ್ತಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಸಾಹಿತಿ ಲೋಕದ ಸಾಧನೆಗಾಗಿ ಪ್ರತಿಷ್ಠಿತ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು.

ಆದರೆ ಇತ್ತೀಚಿನ ಕೆಲ ತಿಂಗಳಿನಿಂದಲೂ ಅವರಿಗೆ ಅನಾರೋಗ್ಯ ಕಾಡಿತ್ತು. ನಿಜಕ್ಕೂ ಸಾಹಿತ್ಯ ಲೋಕ ಯುವ ಸಾಹಿತಿಯನ್ನು ಕಳೆದುಕೊಂಡಿದೆ. ಹಿರಿಯ ಪತ್ರಕರ್ತೆಯ ನಿಧನಕ್ಕೆ ಸಾಹಿತಿಗಳು, ಪತ್ರಕರ್ತರೂ, ಸಹೋದ್ಯೋಗಿಗಳು ಹಾಗೂ ನ್ಯೂಸ್ ನೆಕ್ಸ್ಟ್ ಬಳಗ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.