ಲಾಕ್ ಡೌನ್ ಏರ್ ಲಿಫ್ಟ್ : ದುಬೈನಿಂದ ಮಂಗಳೂರು ತಲುಪಿದ 177 ಮಂದಿ ಕರಾವಳಿಗರು

0

ಮಂಗಳೂರು : ಲಾಕ್ ಡೌನ್ ನಿಂದಾಗಿ ದುಬೈಯಲ್ಲಿ ಸಿಲುಕಿದ್ದ ಕರಾವಳಿಗರನ್ನು ಹೊತ್ತ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ. 38 ಗರ್ಭಿಣಿಯರು, 5 ಮಂದಿ ಮಕ್ಕಳು ಸೇರಿದಂತೆ 177 ಕರಾವಳಿಗರು ಇದೀಗ ತವರು ಸೇರಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಮೊದಲ ಹಂತದ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ. ಇದರ ಭಾಗವಾಗಿಯೇ ಇಂದು ಕರಾವಳಿಗರನ್ನು ಹೊತ್ತ ಮೊದಲ ವಿಮಾನ ಇದೀಗ ಮಂಗಳೂರಿಗೆ ಬಂದಿಳಿದಿದೆ.
ಆರಂಭದಲ್ಲಿ ವೈದ್ಯಕೀಯ ಸಮಸ್ಯೆ, ಉದ್ಯೋಗ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ಕೌಟಿಂಬಿಕ ವೈದ್ಯಕೀಯ ಅಗತ್ಯತೆಯಿರುವವನ್ನು ಕರೆ ತರಲಾಗಿದ್ದು, ವಿಮಾನದಲ್ಲಿದ್ದ 177 ಮಂದಿ ಪ್ರಯಾಣಿಕರ ಪೈಕಿ 88 ಮಂದಿ ಪುರುಷರು, 84 ಮಂದಿ ಮಹಿಳೆಯರು, 2 ಮಗು ಹಾಗೂ 5 ಮಂದಿ ಮಕ್ಕಳಿದ್ದಾರೆ.

ವಿದೇಶಗಳಿಂದ ಕರಾವಳಿಗರು ಆಗಮಿಸುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರಿಗೆ ವಿಮಾನ ನಿಲ್ದಾಣದ ಪ್ರವೇಶವನ್ನು ನಿರಾಕರಿಸಲಾಗಿತ್ತು. ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.‌ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದುಬೈನಿಂದ ಹೊರಟಿದ್ದ ವಿಮಾನ 10.10 ಕ್ಕೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಪ್ರಯಾಣಿಕರು ವಿಮಾನದಿಂದ ಇಳಿದ ನಂತರ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆಯನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಯಿತು.

ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ವಿದೇಶದಿಂದ ಮರಳಿರುವ ಪ್ರತಿಯೊಬ್ಬರನ್ನು ಕೂಡ ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸಲಿದೆ.

Leave A Reply

Your email address will not be published.