ಅಯ್ಯಪ್ಪನಿಗೂ ತಟ್ಟಿದ ಕೊರೊನಾ ಎಫೆಕ್ಟ್ ! ದೇವಸ್ಥಾನಕ್ಕೆ ಬರಲೇ ಬೇಡಿ ಅಂತಿದೆ ಆಡಳಿತ ಮಂಡಳಿ

0

ಶಬರಿಮಲೆ : ವಿಶ್ವವನ್ನೇ ಕಾಡುತ್ತಿರೋ ಕೊರೊನಾ ವೈರಸ್ ಎಫೆಕ್ಟ್ ಇದೀಗ ಶಬರಿಮಲೆಯಲ್ಲಿರೋ ಅಯ್ಯಪ್ಪಸ್ವಾಮಿಗೂ ತಟ್ಟಿದೆ. ಕೇರಳದಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚುತ್ತಿರೋ ಬೆನ್ನಲ್ಲೇ ದೇವಸ್ವಂ ಆಡಳಿತ ಮಂಡಳಿ ಭಕ್ತರಿಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಾರದಂತೆ ಮನವಿ ಮಾಡಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕೇರಳಕ್ಕೆ ಕಾಲಿಟ್ಟಿದ್ದ ಕೊರೊನಾ ವೈರಸ್ ದಿನೇ ದಿನೇ ತನ್ನ ರೌದ್ರನರ್ತನ ಮೆರೆಯುತ್ತಿದೆ. ಕೇರಳದಲ್ಲಿ ಇದುವರೆಗೂ 19 ಮಂದಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರೋ ಬೆನ್ನಲ್ಲೇ ಕೇರಳ ಸರಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡೋ ಮೂಲಕ ಪರೀಕ್ಷೆಯನ್ನೇ ರದ್ದುಗೊಳಿಸಿದೆ. ಸಾರ್ವಜನಿಕ ಸಭೆ ಸಮಾರಂಭಗಳಿಗೂ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಪ್ರವಾಸಿ ತಾಣಗಳ ಮೇಲೆಯೂ ನಿರ್ಬಂಧ ಹೇರಲಾಗುತ್ತಿದೆ. ಸಿನಿಮಾ ಪ್ರದರ್ಶನ ಕೂಡ ಬಂದ್ ಆಗೋ ಸಾಧ್ಯತೆಯಿದೆ. ಈ ನಡುವಲ್ಲೇ ಶಬರಿಮಲೆಯಲ್ಲಿ ಅಯ್ಯಪ್ಪನ ದೇಗುಲದಲ್ಲಿ ನಡೆಯೋ ಪೂಜಾ ಕಾರ್ಯ ಕೇರಳಿಗರ ಆತಂಕಕ್ಕೆ ಕಾರಣವಾಗಿದೆ.

ಶಬರಿಮಲೆ ಧರ್ಮಶಾಸ್ತ ಅಯ್ಯಪ್ಪನ ಸನ್ನಿಧಿಯಲ್ಲಿ ಮಾರ್ಚ್ 14 ರಿಂದ 19ರ ವರೆಗೆ ತಿಂಗಳ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್ 20 ರಿಂದ 30ರ ವರೆಗೆ ಕೊಡಿಯಿಟ್ಟು ಉತ್ಸವ ಜರುಗಲಿದೆ. ಮಾತ್ರವಲ್ಲ ಎಪ್ರಿಲ್ 10 ರಿಂದ 18ರ ವರೆಗೆ ನಡೆಯೋ ವಿಶು ಮಹೋತ್ಸವದ ಹಿನ್ನೆಲೆಯಲ್ಲಿ ಅಯ್ಯಪ್ಪನ ಸನ್ನಿಧಿಗೆ ಲಕ್ಷಾಂತರ ಮಂದಿ ಆಗಮಿಸೋ ನಿರೀಕ್ಷೆಯಿದೆ.

ಒಂದೆಡೆ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರೋ ಬೆನ್ನಲ್ಲೇ ಶಬರಿಮಲೆಗೆ ಲಕ್ಷಾಂತರ ಮಂದಿ ಮಾಲಾಧಾರಿಗಳು ಆಗಮಿಸೋ ನಿರೀಕ್ಷೆಯಿರೋದ್ರಿಂದಾಗಿ ಕೊರೊನಾ ಸೋಂಕು ಇನ್ನಷ್ಟು ಉಲ್ಬಣವಾಗೋ ಸಾಧ್ಯತೆಯಿದೆ. ಹೀಗಾಗಿಯೇ ಶಬರಿಮಲೆಯ ಧರ್ಮಶಾಸ್ತ ಅಯ್ಯಪ್ಪನ ಸನ್ನಿಧಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರೋ ದೇವಸ್ವಂ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ವಾಸು ಅಯ್ಯಪ್ಪ ಸ್ವಾಮಿಯ ದೇಗುಲಕ್ಕೆ ಬರಬೇಡಿ ಅಂತಾ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಶಬರಿಮಲೆಯ ಯಾತ್ರೆಯನ್ನು ಸ್ವಲ್ಪ ದಿನದ ಮಟ್ಟಿಗಾದರೂ ಮುಂದೂಡಿ ಅನ್ನುತ್ತಿದೆ. ಆದ್ರೆ ಈಗಾಗಲೇ ಮಾಲಾಧಾರಣೆಯನ್ನು ಮಾಡಿರೋ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ. ದೇವಸ್ವಂ ಮಂಡಳಿಯ ನಿರ್ಧಾರದಿಂದ ಅಯ್ಯಪ್ಪ ಭಕ್ತರು ನಿರಾಸೆಗೊಂಡಿದ್ದಾರೆ.

Leave A Reply

Your email address will not be published.