ಹೆಚ್ಚುತ್ತಿದೆ ಕೊರೊನಾ ಸೋಂಕು : ಜೂನ್ 30ವರೆಗೂ ರೈಲು ಸಂಚಾರ ರದ್ದು

0

ನವದೆಹಲಿ : ಕೊರೋನಾ ವೈರಸ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ದೇಶದಾದ್ಯಂತ 4ನೇ ಹಂತದ ಲಾಕ್​ಡೌನ್​ ಮುಂದುವರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರವನ್ನು ರದ್ದು ಮಾಡಿರುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.

ದೇಶದಾದ್ಯಂತ ಮೂರನೇ ಹಂತದ ಲಾಕ್ ಡೌನ್ ನಡುವಲ್ಲೇ ರೈಲ್ವೆ ಇಲಾಖೆ ದೇಶದ ಪ್ರಮುಖ 15 ನಗರಗಳಿಗೆ ರೈಲು ಸಂಚಾರ ಆರಂಭಿಸಿತ್ತು. ಅಲ್ಲದೇ 3ನೇ ಹಂತದ ಲಾಕ್​ಡೌನ್​ ಪೂರ್ಣಗೊಂಡ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಮಾತ್ರವಲ್ಲ ಆನ್​ಲೈನ್ ಬುಕ್ಕಿಂಗ್​​ಗೂ ಅವಕಾಶ ನೀಡಿತ್ತು. ಆದ್ರೀಗ 4ನೇ ಹಂತದ ಲಾಕ್​ಡೌನ್​ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ಹೇಳಿದೆ. ಈಗಾಗಲೇ ಬುಕ್​ ಮಾಡಲಾದ ಟಿಕೆಟ್​ಗಳನ್ನು ಕ್ಯಾನ್ಸಲ್​ ಮಾಡಿ ಹಣ ಹಿಂದಿರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಶ್ರಮಿಕ್​ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವೆಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಇತರ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ರೈಲಿನ ಮೂಲಕ ಆಯಾ ರಾಜ್ಯಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಈ ರೈಲುಗಳು ನಿಗದಿತ ಸಮಯದಲ್ಲಿ ಸಂಚಾರ ನಡೆಸಲಿವೆ. ಮೇ 17 ರಂದು 3ನೇ ಹಂತದ ಲಾಕ್ ಡೌನ್ ಪೂರ್ಣಗೊಳ್ಳಲಿದ್ದು, ದೇಶದ ಹಲವು ಪ್ರದೇಶಗಳಿಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲು ರೈಲ್ವೆ ಇಲಾಖೆ ಮುಂದಾಗಿತ್ತು. ಆದ್ರೀಗ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ ಆದೇಶವನ್ನು ಮುಂದುವರಿಸುವ ಸಾಧ್ಯತೆಯಿರೋ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ಕ್ರಮಕೈಗೊಂಡಿದೆ.

Leave A Reply

Your email address will not be published.