ಬೆಂಗಳೂರಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ

0

ಬೆಂಗಳೂರು : 1993ರ ಮುಂಬಯಿ ಸರಣಿ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ರವಿ ಪೂಜಾರಿಯನ್ನು ಬಿಗಿ ಭದ್ರತೆಯೊಂದಿಗೆ ಬೆಂಗಳೂರಿಗೆ ಕರೆ ತರಲಾಗಿದೆ. ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಿಗಿ ಭದ್ರತೆಯಲ್ಲಿ ಪಾತಕಿಯನ್ನು ತನಿಖಾ ಕೇಂದ್ರದಲ್ಲಿ ಇರಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕೂತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ, ಕಳೆದ 15 ವರ್ಷಗಳಿಂದ ಭೂಗತನಾಗಿದ್ದ ರವಿ ಪೂಜಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. 2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್​ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಭಾರತಕ್ಕೆ ಕರೆತರಲು ಕಾನೂನಿನ ತೊಡಕಾಗಿತ್ತು. ಆದರೆ ಸೆನೆಗಲ್ ನ್ಯಾಯಾಲಯ ರವಿ ಪೂಜಾರಿ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿರೋ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಕರೆತರಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆ ಮೂಲದ ರವಿ ಪೂಜಾರಿ ವಿರುದ್ದ ಮಂಗಳೂರು, ಉಡುಪಿಯಲ್ಲಿ 39 ಪ್ರಕರಣ ಹಾಗೂ ಬೆಂಗಳೂರಿನಲ್ಲಿ 38 ಪ್ರಕರಣ ದಾಖಲಾಗಿದೆ. ರಾಜಕಾರಣಿಗಳು, ಬಾಲಿವುಡ್ ಸ್ಟಾರ್ ಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದ ರವಿ ಪೂಜಾರಿಗಾಗಿ ರಾಷ್ಟ್ರೀಯ ತನಿಖಾ ದಳ ಹಾಗೂ RAW ಸೇರಿಂದತೆ ತನಿಖಾ ತಂಡಗಳು ಕಳೆದೊಂದು ದಶಕಗಳಿಂದಲೂ ಹುಡುಕಾಟ ನಡೆಸುತ್ತಿದ್ದವು.
ಕೊನೆಗೂ ರವಿ ಪೂಜಾರಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ,. ರವಿ ಪೂಜಾರಿ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಪೊಲೀಸರು ಪಾತಕಿಯ ಮೇಲೆ ಹದ್ದಿನಕಣ್ಣು ಇರಿಸಿದ್ದಾರೆ.

Leave A Reply

Your email address will not be published.