Bitcoin Future : 1000 ಬಿಟ್ ಕಾಯಿನ್ ಖರೀದಿಸಿರುವ ಈ ದೇಶದ ಅಧ್ಯಕ್ಷರು ಡಾಲರ್‌ಗೆ ಭವಿಷ್ಯವಿಲ್ಲ ಎಂದಿದ್ದೇಕೆ?

ಒಂದಾನೊಂದು ಕಾಲದಿಂದ ಜಗತ್ತಿನ ಆರ್ಥಿಕತೆ ಮತ್ತು ವಹಿವಾಟಿನ ಮೇಲೆ ಪಾರುಪತ್ಯ ಸಾಧಿಸಿರುವ ಅಮೆರಿಕದ ಡಾಲರ್ (US Dollar) ಕಥೆ ಮುಗಿದುಹೋಗಿದೆ. ಇನ್ನೇನಿದ್ದರೂ ಬಿಟ್ ಕಾಯಿನ್ ಯುಗ (Bitcoin Future)ಎಂದು ಶಾಕಿಂಗ್ ಹೇಳಿಕೆಯೊಂದನ್ನು ಎಲ್ ಸಾಲ್ವಡಾರ್ ದೇಶದ ಅಧ್ಯಕ್ಷ ನಯೀಬ್ ಬುಕೆಲೆ ಹೇಳಿರುವುದು ಅಂತರ್ಜಾಲ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಎಲ್ ಸಾಲ್ವಡಾರ್ ದೇಶದ ಅಧ್ಯಕ್ಷ ನಯೀಬ್ ಬುಕಿಲೆ (El Salvador President Nayib Bukele) ಅವರಿಗೆ ಬಿಟ್ ಕಾಯಿನ್ ಮೇಲೆ ತುಸು ಜಾಸ್ತಿಯೇ ಪ್ರೀತಿ ಇರುವುದು ಈಗಾಗಲೆ ಬಹಿರಂಗಗೊಂಡಿದೆ. ಆದರೆ ಅಮೆರಿಕ ಡಾಲರ್ ಮತ್ತು ಬಿಟ್ ಕಾಯಿನ್ ಎರಡನ್ನೂ ಹೋಲಿಸಿ ಅವರು ಕಮೆಂಟಿಸಿರುವುದು ಆರ್ಥಿಕ ಲೋಕದ ಸದ್ಯದ ವೈರಲ್ ವಿಷಯ.

ಈ ಬಿಟ್‌ಕಾಯಿನ್ ಯುಗವನ್ನು ಎಲ್ ಸಾಲ್ವಡಾರ್ ಮುನ್ನಡೆಸಲಿದೆ ಎಂದು ಸಹ ಉಲ್ಲೇಖಿಸಿರುವ ನಯೀಬ್ ಬುಕೆಲೆ, ಬಿಟ್ ಕಾಯಿನ್ ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ನಿಜವಾದ ಕ್ರಾಂತಿ. ಬಿಟ್ ಕಾಯಿನ್‌ಅನ್ನು ಆರ್ಥಿಕತೆಯ ಅಭಿವೃದ್ಧಿಗಾಗಿ ಮತ್ತು ಒಳಿತಿಗಾಗಿ ಬಳಸಿಕೊಳ್ಳಬೇಕು. ಇಡೀ ಜಗತ್ತು ಬಿಟ್ ಕಾಯಿನ್ ಕ್ರಾಂತಿಯನ್ನು ಎದುರು ನೋಡುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಈ ವ್ಯಾಖ್ಯಾನದ ಮೂಲಕ ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ ಭೌತಿಕ ಕರೆನ್ಸಿಗಳ ಭವಿಷ್ಯದ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ. ಡಿಜಿಟಲ್ ಮತ್ತು ವಿಕೇಂದ್ರೀಕೃತವಾಗಿರುವುದರಿಂದ ಬಿಟ್‌ಕಾಯಿನ್ ಎಲ್ಲಾ ರೀತಿಯಲ್ಲೂ ಸಮರ್ಪಕವಾಗಿದೆ. ದೇಶವೊಂದರ ಆರ್ಥಿಕತೆಯ ಬೆಳವಣಿಗೆಗೆ ಭೌತಿಕ ಕರೆನ್ಸಿಗಳಿಗಿಂತ ಹೆಚ್ಚು ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಸಹಜವಾಗಿ, ಇದೀಗ ನಮ್ಮಲ್ಲಿನ ಹೆಚ್ಚಿನವರಿಗೆ ಸದ್ಯದ ಮಟ್ಟಿಗೆ ಬಿಟ್ ಕಾಯಿನ್ ಎಂಬುದು ದೂರದ ಕಲ್ಪನೆಯಾಗಿದೆ. ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆಮಾತ್ರ ತಮ್ಮ ದೇಶದಲ್ಲಿ ಬಿಟ್ ಕಾಯಿನ್ ಅನ್ನು ಜಾರಿಗೆ ತರಲು ತೀವ್ರ ಆಸಕ್ತಿ ಹೊಂದಿದ್ದಾರೆ. ಬಿಟ್‌ಕಾಯಿನ್ ಎಲ್ ಸಾಲ್ವಡಾರ್‌ನಲ್ಲಿ ಕಾನೂನುಬದ್ಧವಾಗಿ ಕರೆನ್ಸಿಯ ಸ್ಥಾನಮಾನವನ್ನು ಪಡೆಯುತ್ತದೆ ಎಂದು ಅವರು ಈಗಾಗಲೇ ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೇ ವಲಸಿಗರು ಎಲ್ ಸಾಲ್ವಡಾರ್‌ಗೆ ಕಳುಹಿಸಿದ ಹಣದ ಮೇಲೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವಿಧಿಸುವ ಸುಮಾರು $400 ಮಿಲಿಯನ್ ಶುಲ್ಕವನ್ನು ಕಡಿತಗೊಳಿಸುವ ನೀತಿಯನ್ನೂ ಅವರು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ.

ಎಲ್ ಸಾಲ್ವಡಾರ್ ಸೆಪ್ಟೆಂಬರ್‌ನಲ್ಲಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧಗೊಳಿಸಿತು. ಜೊತೆಗೆ ಒಟ್ಟು 400 ಬಿಟ್‌ಕಾಯಿನ್‌ಗಳನ್ನು ಖರೀದಿಸಿತು. ಸದ್ಯ ಎಲ್ ಸಾಲ್ವಡಾರ್ ಖಜಾನೆಯು 1,000 ಬಿಟ್‌ಕಾಯಿನ್‌ಗಳನ್ನು ಹೊಂದಿದೆ. ಅಲ್ಲದೇ ಬಿಟ್ ಕಾಯಿನ್ ವಹಿವಾಟನ್ನು ಹೆಚ್ಚಿಸಲು ಎಲ್ ಸಾಲ್ವಡಾರ್ ದೇಶಾದ್ಯಂತ 200 ಬಿಟ್‌ಕಾಯಿನ್ ಟೆಲ್ಲರ್ ಯಂತ್ರಗಳನ್ನು ಸ್ಥಾಪಿಸಿದೆ ಮತ್ತು ಕ್ರಿಪ್ಟೋಕರೆನ್ಸಿಯನ್ನು ಅಳವಡಿಸಿಕೊಳ್ಳುವ ನಾಗರಿಕರಿಗೆ ಪ್ರೋತ್ಸಾಹವನ್ನು ನೀಡುತ್ತದೆ.

ಇದನ್ನೂ ಓದಿ: ನೀವು ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮಗೂ ಕಾದಿದೆ ಅಪಾಯ…!

( Bitcoin is the future says El Salvador President Nayib Bukele)

Comments are closed.